M&HR
  • HOME
  • About Us
  • Our Services
    • Human Resource
    • Publications
    • NGO & CSR
    • PoSH
    • Training Programmes
    • Certificate Training Courses
  • Online Store
  • Leader's Talk
  • HR Blog
  • Kannada Blog
  • Find Freelance Jobs
  • Current Job Openings
  • Videos
  • Search
  • Join HR Online Groups
  • Contact Us
  • HOME
  • About Us
  • Our Services
    • Human Resource
    • Publications
    • NGO & CSR
    • PoSH
    • Training Programmes
    • Certificate Training Courses
  • Online Store
  • Leader's Talk
  • HR Blog
  • Kannada Blog
  • Find Freelance Jobs
  • Current Job Openings
  • Videos
  • Search
  • Join HR Online Groups
  • Contact Us
M&HR

HR BLOG 

Inviting meaningful articles
For More Details

ಸ್ಮಯೋರ್ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ಮತ್ತು ಕನ್ನಡಪರ ಧೋರಣೆ ಏಕಘಟಕ ಅಧ್ಯಯನ

6/29/2018

0 Comments

 
Picture
ಸ್ಮಯೋರ್ ಗಣಿ ಕಂಪನಿ ಸಂಡೂರು ರಾಜಮನೆತನದ ಮುಖ್ಯಸ್ಥರ ಒಡೆತನದಲ್ಲಿ 1954 ರಲ್ಲಿ ಪ್ರಾರಂಭಗೊಂಡಿದೆ. ಅಂದಿನ ಗಣಿಯ ವಿಸ್ತೀರ್ಣ ಸುಮಾರು ನಲವತ್ತೇಳು ಚದುರ ಕಿ.ಮೀ. ಇದ್ದು, ಸರ್ಕಾರದ ಕಾನೂನು ಮತ್ತು ಇತರೆ ಕಾರಣಗಳಿಗಾಗಿ, ಕಾಲಕಾಲಕ್ಕೆ ಕಡಿಮೆಯಾಗುತ್ತಾ, ಪ್ರಸ್ತುತ ಅದರ ವ್ಯಾಪ್ತಿ 3200 ಹೆಕ್ಟೇರ್‍ಗಳಿವೆ. ಉತ್ತಮ ಗುಣಮಟ್ಟದ ಮ್ಯಾಂಗನೀಸ್ ಮತ್ತು ಕಬ್ಬಿಣದ ಅದಿರನ್ನು ಅನುಕ್ರಮವಾಗಿ ಮತ್ತು ವಾರ್ಷಿಕವಾಗಿ 2.54 ಲಕ್ಷ ಮತ್ತು 11.376 ದಶಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಮಾಡಲಾಗುತ್ತಿದೆ. ಉತ್ಪಾದನೆಯನ್ನು ಆಂತರಿಕವಾಗಿ ಮಾರಾಟ ಮಾಡುವುದರ ಜೊತೆಗೆ ಹೊರ ದೇಶಗಳಿಗೆ ರಫ್ತನ್ನೂ ಮಾಡಲಾಗುತ್ತಿದೆ. ಪ್ರಸ್ತುತ ಸಂಸ್ಥೆಯಲ್ಲಿ ಒಟ್ಟಾರೆಯಾಗಿ ಉದ್ಯೋಗಿ / ಕಾರ್ಮಿಕರ ಸಂಖ್ಯೆ 1972 ಇದೆ.
Picture
ಸ್ಮಯೋರ್ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡಲಾಗುತ್ತದೆ. ಉದ್ಯೋಗಿಗಳ / ಕಾರ್ಮಿಕರ ಪ್ರತಿಶತ 90 ರಷ್ಟು ಜನರು ಕನ್ನಡದವರು, ನೇಮಕಾತಿಯಿಂದ ನಿವೃತ್ತಿಯವರೆಗೆ ಅವಶ್ಯವಿದ್ದ ಕಡೆಗಳೆಲ್ಲಾ ಕನ್ನಡವನ್ನು ಬಳಸಲಾಗುತ್ತಿದೆ.

ತರಬೇತಿ :- ಗಣಿ ಕಾರ್ಮಿಕರು, ಅದಿರು ಸಾಗಾಣೆಕಾರರು, ಗಣಿ ಗುಂಪಿನ ಮುಖ್ಯಸ್ಥರು, ರಂಧ್ರ ಕೊರೆಯುವವರು, ಎಲೆಕ್ಟ್ರೀಷಿಯನ್, ಪ್ಲಂಬರ್, ಮೆಕ್ಯಾನಿಕ್ ಇತ್ಯಾದಿ ವೃತ್ತಿಗಳನ್ನು ಮಾಡಲು ಕಂಪನಿ ಸೇರಿದವರಿಗೆ, ಕಂಪನಿಯೇ ಸ್ಥಾಪಿಸಿದ ಗುಂಪು ವೃತ್ತಿಪರ ತರಬೇತಿ ಕೇಂದ್ರದಲ್ಲಿ ಸೂಕ್ತ ಪರಿಚಯಾತ್ಮಕ ತರಬೇತಿಯನ್ನು ಕನ್ನಡದಲ್ಲಿ ಕೊಡಲಾಗುತ್ತದೆ. ಹಾಗೇನೇ ಆ ನಂತರ ನಿಯತಕಾಲಿಕವಾಗಿ ಕೊಡುವ ಮುಂದುವರಿದ ಪುನಶ್ಚೇತನ ತರಬೇತಿಯನ್ನು ಕನ್ನಡ ಮಾಧ್ಯಮದಲ್ಲಿ ಕೊಡಲಾಗುತ್ತದೆ. ಕಂಪನಿಗೆ ಸೇರಿದ ಇತರೆ ಸಿಬ್ಬಂದಿಗೂ ಇದೇ ತರಹ ಪರಿಚಯಾತ್ಮಕ ತರಬೇತಿಯನ್ನು ಕೊಡಿಸಲಾಗುತ್ತದೆ. ಉನ್ನತಾಧಿಕಾರಿಗಳಿಗೆ ಪುನಶ್ಚೇತನ ತರಬೇತಿಗಾಗಿ ಹೊರಗಡೆಗೆ ಕಳಿಸಲಾಗುತ್ತದೆ.

ಪ್ರಗತಿ ಪರಿಶೀಲನಾ ಸಭೆಗಳು :- ಗಣಿ ಇಲಾಖೆ, ಯಾಂತ್ರಿಕ ಇಲಾಖೆ, ಮುಂತಾದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಗಳನ್ನು ಕನ್ನಡದಲ್ಲಿ ಮಾಡಲಾಗುತ್ತದೆ. ಈ ಸಭೆಗಳಿಗೆ ಇತರೆ ಇಲಾಖಾ ಮುಖ್ಯಸ್ಥರನ್ನು ಹಾಗೂ ಮಾನವ ಸಂಪನ್ಮೂಲ ಇಲಾಖಾ ಮುಖ್ಯಸ್ಥರನ್ನು ಆಹ್ವಾನಿಸಲಾಗುತ್ತದೆ. ಹೆಚ್ಚಿನ ಕಾರ್ಮಿಕರ, ಕುಶಲಕರ್ಮಿಗಳ ಅವಶ್ಯಕತೆಗಳನ್ನು, ಪ್ರಸ್ತಾವನೆಗಳನ್ನು ಕೂಲಂಕುಷವಾಗಿ ಚರ್ಚಿಸಿ ಪೂರೈಸಲಾಗುತ್ತದೆ. ಈ ಸಭೆಗಳು ಕನ್ನಡ ಮಾಧ್ಯಮದಲ್ಲಿಯೇ ನಡೆಯುತ್ತವೆ ಎಂದು ಬೇರೆ ಹೇಳಬೇಕಾಗಿಲ್ಲ.

ಕಾರ್ಮಿಕರ ಬೇಡಿಕೆಗಳು :- ಸ್ಮಯೋರ್ ಸಂಸ್ಥೆಯಲ್ಲಿ ಒಂದು ನೋಂದಾಯಿತ ಕಾರ್ಮಿಕ ಸಂಘವಿದೆ. ಅವರು ತಮ್ಮ ಬೇಡಿಕೆಗಳನ್ನು, ಪ್ರಸ್ತಾವನೆಗಳನ್ನು ಇಲಾಖಾ ಮುಖ್ಯಸ್ಥರಿಗೆ ಹಾಗೂ ಕಂಪನಿ ನಿರ್ದೇಶಕರಿಗೆ ಮಂಡಿಸುವುದು ಕನ್ನಡದಲ್ಲಿಯೆ, ನಿಯತಕಾಲಿಕವಾಗಿ ಸಂಬಳ ಮತ್ತು ಇತ್ಯಾದಿ ಭತ್ಯೆಗಳ ಪರಿಷ್ಕರಣೆ ನಡೆಯುತ್ತದೆ. ಇದನ್ನು ಸಂಸ್ಥೆಯ ನಿರ್ವಾಹಕ ನಿರ್ದೇಶಕರು ಒಂದು ಸಭೆ ಕರೆದು ಪ್ರಕಟಿಸುತ್ತಾರೆ. ಇದು ಕನ್ನಡದಲ್ಲೇ ನಡೆಯುತ್ತದೆ.

ಶಿಸ್ತಿನ ನಿರ್ವಹಣೆ :- ಉದ್ಯೋಗಿಗಳು, ಕಾರ್ಮಿಕರು ದುರ್ನಡತೆಯಲ್ಲಿ ತೊಡಗಿದಾಗ ಸೂಕ್ತ ವಿಚಾರಣೆ ಮತ್ತು ಶಿಸ್ತಿನ ಕ್ರಮಗಳ ಮೂಲಕ ಅವರನ್ನು ತಿದ್ದಬೇಕಾಗುತ್ತದೆ. ಇಸ್ವಿ 1990ರ ತನಕ ದುರ್ನಡತೆಯಲ್ಲಿ ತೊಡಗಿದ ಕಾರ್ಮಿಕರಿಗೆ ಆರೋಪ ಪಟ್ಟಿ, ವಿಚಾರಣಾ ನೋಟೀಸು, ಶಿಕ್ಷೆಯ ಆದೇಶ ಮುಂತಾದವುಗಳಿಗೆ ಆಂಗ್ಲ ಭಾಷೆಯನ್ನು ಬಳಸಲಾಗುತ್ತಿತ್ತು. ವಿಚಾರಣಾ ನಡುವಳಿಕೆ, ವರದಿಗಳೂ ಆಂಗ್ಲ ಭಾಷೆಯಲ್ಲೇ ಇರುತ್ತಿದ್ದವು. ಇವುಗಳು ಕಾರ್ಮಿಕರಿಗೆ ಅರ್ಥವಾಗುತ್ತಿರಲಿಲ್ಲ. ಅದರ ಜೊತೆಗೆ ನಡೆಯುವ ಪತ್ರ ವ್ಯವಹಾರ ಕನ್ನಡದಲ್ಲಿಯೇ ಇರಬೇಕಾಗಿತ್ತು. ಸದರಿ ವಿಚಾರವನ್ನು ಪ್ರಧಾನ ವ್ಯವಸ್ಥಾಪಕರ ಜೊತೆ ಚರ್ಚಿಸಲಾಯಿತು. ಅವರ ಒಪ್ಪಿಗೆಯ ಮೇರೆಗೆ ಕಾರ್ಮಿಕರೊಡನೆ ನಡೆಯುವ ಪತ್ರ ವ್ಯವಹಾರಕ್ಕೆ ಕನ್ನಡವನ್ನು ಬಳಸಲಾಯಿತು. ನೋಟೀಸು, ಆರೋಪಪಟ್ಟಿ, ವಿಚಾರಣಾ ತಿಳುವಳಿಗಳನ್ನು ಕನ್ನಡದಲ್ಲಿ ಕೊಡಲಾಯಿತು. ವಿಚಾರಣೆಗಳನ್ನು ಕನ್ನಡದಲ್ಲಿ ಮಾಡಲಾಯಿತು. ವಿಚಾರಣಾ ನಡವಳಿಕೆಗಳನ್ನು ಕನ್ನಡದಲ್ಲಿಯೇ ಮಾಡಿ ಆರೋಪಿಗೆ ಒಂದು ಪ್ರತಿ ಕೊಡಲಾಯಿತು. ಮುಂದಿನ ಶಿಸ್ತಿನ ಕ್ರಮದ ಬಗ್ಗೆ ತಿಳಿಸಲು ಕೊಡುವ ನೋಟೀಸನ್ನು ಕನ್ನಡದಲ್ಲೇ ಕೊಡಲಾಯಿತು. ಅಂತಿಮವಾಗಿ ಶಿಸ್ತಿನ ಕ್ರಮದ ಆದೇಶವನ್ನೂ ಕನ್ನಡದಲ್ಲೇ ಕೊಡಲಾಯಿತು. ಹೀಗೆ ಶಿಸ್ತಿನ ನಿರ್ವಹಣೆಯನ್ನು ಕನ್ನಡೀಕರಿಸಲಾಯಿತು. ಅದೇ ಪದ್ಧತಿ ಇಂದಿಗೂ ಇದೆ.

ಸಾರ್ವಜನಿಕ ಸಂಪರ್ಕ ಮತ್ತು ಅಭಿವೃದ್ಧಿ ಇಲಾಖೆ :- ಸ್ಮಯೋರ್ ಸಂಸ್ಥೆ 1969 ರಷ್ಟು ಹಿಂದೆಯೇ ಸಾರ್ವಜನಿಕ ಸಂಪರ್ಕ ಮತ್ತು ಅಭಿವೃದ್ಧಿ ಇಲಾಖೆಯನ್ನು ಪ್ರಾರಂಭಿಸಿದೆ. ಸಾರ್ವಜನಿಕ ಸಂಪರ್ಕ ವಿಭಾಗವು ಕಂಪನಿಯ ಸಾರ್ವಜನಿಕ ಸಂಪರ್ಕವನ್ನು ಗಣಿ ಕೆಲಸಗಳಿಗೆ ನಿಯತಕಾಲಿಕವಾಗಿ ಬೇಕಾಗುವ ಕಾರ್ಮಿಕರನ್ನು ಸಂಡೂರು ಬೆಟ್ಟಗಳ ಸುತ್ತಮುತ್ತ ಇರುವ ಗ್ರಾಮಗಳಿಂದ ಆರಿಸಲು ನೆರವು ನೀಡುತ್ತಿದ್ದಾರೆ.

ಅಭಿವೃದ್ಧಿ ವಿಭಾಗವು ಸಂಡೂರು ತಾಲೂಕಿನ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದೆ. ಬೆಂಕಿ ಅನಾಹುತ, ನೆರೆ ಹಾವಳಿ ಮುಂತಾದ ಸಮಯಗಳಲ್ಲಿ ಪರಿಹಾರವನ್ನು ಒದಗಿಸಲಾಗುತ್ತಿದೆ. ಗ್ರಾಮಗಳ ಮತ್ತು ಪಂಚಾಯಿತಿ ರಾಜ್ಯ ಸಂಸ್ಥೆಗಳು, ಸರ್ಕಾರಗಳ ಮಧ್ಯೆ ಪರಿವರ್ತಕ ಹಾಗೂ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದೆ. ಗ್ರಾಮಾಂತರ ಪ್ರದೇಶದ ಅಭಿವೃದ್ಧಿಗೆ ಕಾರಣೀಭೂತವಾಗಿದೆ. ಇತ್ತೀಚಿಗೆ ಈ ವಿಭಾಗವನ್ನು ಆಡಳಿತ ಮಂಡಳಿಯ ಸಾಮಾಜಿಕ ಜವಾಬ್ದಾರಿ ಇಲಾಖೆ (ಸಿ.ಎಸ್.ಆರ್.) ಎಂದು ನವೀಕರಿಸಲಾಗಿದೆ. ಈ ಎಲ್ಲಾ ನಡವಳಿಕೆಗಳು, ಅದಕ್ಕೆ ಬೇಕಾದ ಪತ್ರ ವ್ಯವಹಾರಗಳು ಕನ್ನಡ ಮಾಧ್ಯಮದಲ್ಲಿಯೇ ಆಗಿವೆ.

ಸಾರ್ವಜನಿಕ ಸಮಾರಂಭಗಳು :- ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಗಾಂಧೀ ಜಯಂತಿ, ಮಕ್ಕಳ ದಿನಾಚರಣೆ, ಶಿಕ್ಷಕರ ದಿನಾಚರಣೆ ಮುಂತಾದವುಗಳನ್ನು ಬಹಳ ಆಸಕ್ತಿಯಿಂದ ಕನ್ನಡದಲ್ಲಿ ಆಚರಿಸಲಾಗುತ್ತದೆ. ಸದರಿ ಸಂದರ್ಭದಲ್ಲಿ ಸ್ವಾತಂತ್ರ ಸಂಗ್ರಾಮ, ಸಂವಿಧಾನ, ಸ್ವಾತಂತ್ರ ನೇತಾರರು, ನಾಗರೀಕರ ಹಕ್ಕು ಬಾಧ್ಯತೆಗಳು ಮುಂತಾದ ವಿಚಾರಗಳ ಬಗ್ಗೆ ಕಾರ್ಮಿಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ತಿಳುವಳಿಕೆ ಮಾಡಿಕೊಡಲಾಗುತ್ತದೆ. ಹಾಗೆನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿಯೂ ನಾಡು, ನುಡಿಗಳ ಅರಿವು ಮೂಡಿಸಲಾಗುತ್ತದೆ.

ಗಣೇಶೋತ್ಸವ, ಗ್ರಾಮ ದೇವತೆ ಉತ್ಸವಗಳು ಬಹಳ ವೈಭವದಿಂದ ಆಚರಿಸಲಾಗುತ್ತದೆ. ಸದರಿ ಸಮಯದಲ್ಲಿ ಸಂಗೀತ, ನಾಟಕ, ನೃತ್ಯ, ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಎಲ್ಲಾ ಸಮಾರಂಭ, ಉತ್ಸವಗಳು ಕನ್ನಡದಲ್ಲೇ ನಡೆಯುತ್ತವೆ. ಈ ಚಟುವಟಿಕೆಗಳಿಂದ ಕಾರ್ಮಿಕರ ಉದ್ಯೋಗಿಗಳ ವಿಶ್ವಾಸವನ್ನು ಗಳಿಸಲಾಗುತ್ತದೆ.

ಗಣಿ ಸುರಕ್ಷತಾ ಸಪ್ತಾಹ :- ಗಣಿ ಚಟುವಟಿಕೆಗಳನ್ನು ಸುರಕ್ಷಿತವಾಗಿ ಮಾಡಲು ಬೇಕಾದ ತಿಳುವಳಿಕೆಯನ್ನು ಕೊಡುವುದು, ಇದ್ದ ತಿಳುವಳಿಕೆಯನ್ನು ನವೀಕರಿಸುವುದು ಮುಂತಾದ ಉದ್ದೇಶಗಳನ್ನಿಟ್ಟುಕೊಂಡು ಗಣಿ ಸುರಕ್ಷತಾ ಸಪ್ತಾಹವನ್ನು ವರ್ಷಕ್ಕೊಮ್ಮೆ ಆಚರಿಸಲಾಗುತ್ತದೆ. ಗಣಿ ಅಧಿಕಾರಿಗಳಿಂದ, ವಿಷಯ ಪರಿಣಿತರಿಂದ ಭಾಷಣಗಳನ್ನು ಏರ್ಪಡಿಸಲಾಗುತ್ತದೆ. ಎಲ್ಲಾ ಕಾರ್ಮಿಕರಿಗೆ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ಕೊಡಲಾಗುತ್ತದೆ.

ಸ್ಮಯೋರ್ ಗಣಿಗಳು ಸುರಕ್ಷತೆಗೆ ಪ್ರಸಿದ್ಧಿಯಾಗಿವೆ. ಸ್ಮಯೋರ್ ಗಹಣಿಗೆ ಎರಡು ಬಾರಿ ರಾಷ್ಟ್ರೀಯ ಸುರಕ್ಷತಾ ಪ್ರಶಸ್ತಿ ಬಂದಿವೆ. ಸ್ಮಯೋರ್ ಸಂಸ್ಥೆಗೆ ಅನೇಕಾನೇಕ ಬಾರಿ ವಲಯ ಮಟ್ಟದಲ್ಲಿ ಗಣಿ ಸುರಕ್ಷತೆಗೆ, ಯಾಂತ್ರಿಕ ವಿಭಾಗದ ಶಿಸ್ತಿಗೆ, ಮಾನವ ಸಂಪನ್ಮೂಲಕ್ಕೆ, ಕಾರ್ಮಿಕ ಕಲ್ಯಾಣಕ್ಕೆ ಪ್ರಥಮ, ದ್ವಿತೀಯ ಪ್ರಶಸ್ತಿಗಳು ಲಭಿಸಿದೆ.

ಹಾಗೇನೇ ಪರಿಸರ ರಕ್ಷಣೆಗೂ ಸಂಸ್ಥೆ ಆದ್ಯತೆಯನ್ನು ಕೊಟ್ಟಿದೆ. ಇತ್ತೀಚಿನ 15 ವರ್ಷಗಳಲ್ಲಿ ಸುಮಾರು 30 ಲಕ್ಷ ಗಿಡಗಳನ್ನು ನೆಟ್ಟು, ಬೆಳೆಸಲಾಗಿದೆ. ಇದರಲ್ಲಿ ಪ್ರತಿಶತ 85 ರಷ್ಟು ಗಿಡಗಳು ಬದುಕುಳಿದಿವೆ. ಸಂಸ್ಥೆಗೆ ಅನೇಕ ಪರಿಸರ ಪ್ರಶಸ್ತಿಗಳು ಬಂದಿವೆ. ನಿಯತಕಾಲಿಕವಾಗಿ ಪರಿಸರ ಜಾಗೃತಿ ಸಭೆಗಳನ್ನು ನಡೆಸಲಾಗಿದೆ. ಈ ಎಲ್ಲಾ ಕೆಲಸಕಾರ್ಯಗಳು ಕನ್ನಡ ಮಾಧ್ಯಮದಲ್ಲೇ ಆಗಿವೆ, ಹೊಸದಾಗಿ ಕಂಪನಿ ಸೇರುವವರು ಈ ವಿಚಾರಗಳನ್ನು ತಿಳಿದು ತುಂಬ ಆಸಕ್ತಿಯಿಂದ ಕಂಪನಿ ಸೇರುತ್ತಾರೆ.

ಯುವಜನ ಶಿಬಿರ :- ಸಂಸ್ಥೆಯಲ್ಲಿ ಎರಡು ಬಾರಿ ಯುವಜನ ಶಿಬಿರಗಳನ್ನು ಮಾಡಲಾಗಿದೆ. ದೇಶಪ್ರೇಮ, ರಾಷ್ಟ್ರಭಕ್ತಿ, ರಾಷ್ಟ್ರೀಯ ಭಾವೈಕ್ಯತೆ, ವ್ಯಕ್ತಿತ್ವ ವಿಕಸನ, ನಾಯಕತ್ವ, ಶಿಸ್ತು, ಆರೋಗ್ಯ, ವ್ಯಾಯಾಮ, ಯೋಗಾಭ್ಯಾಸ, ಸಾಮಾಜಿಕ ಪ್ರಜ್ಞೆ ಮುಂತಾದ ಕಡೆಗಳಿಂದ ವಿದ್ವಾಂಸರನ್ನು ಕರೆಸಿ ಅವರಿಂದ ಉಪನ್ಯಾಸಗಳನ್ನು ಕೊಡಿಸಲಾಗಿದೆ. ಒಂದೊಂದು ಶಿಬಿರದಲ್ಲಿ 100 ಜನ ಯುವಕರನ್ನು ಆರಿಸಿ 30 ದಿನಗಳ ತರಬೇತಿಯನ್ನು (ವಸತಿಸಹಿತ) ಕೊಡಲಾಗಿದೆ. ಕಂಪನಿಗೆ ನೇಮಕಾತಿ ಮಾಡುವಾಗ ಅವರಿಗೆ ಪ್ರಾಶಸ್ತ್ಯವನ್ನು ಕೊಡಲಾಗಿದೆ.

ವಯಸ್ಕರ ಶಿಕ್ಷಣ :- ಸ್ಮಯೋರ್ ಸಂಸ್ಥೆಯಲ್ಲಿ 1992 ರ ಸುಮಾರಿಗೆ 1469 ಉದ್ಯೋಗಿ/ಕಾರ್ಮಿಕರು ಇದ್ದರು. ಅವರಲ್ಲಿ ಕೆಲವರು ತಮ್ಮ ಸಂಬಳ ಪಡೆಯಲು ಸಹಿ ಬದಲು ಹೆಬ್ಬೆಟ್ಟಿನ ಗುರುತನ್ನು ಹಾಕುತ್ತಿದ್ದರು. ಈ ಅನಕ್ಷರಸ್ತರ ಸಂಖ್ಯೆಯನ್ನು ತಿಳಿಯಲು ಒಂದು ಸಮೀಕ್ಷೆಯನ್ನು ಮಾಡಲಾಯಿತು. ಒಟ್ಟಾರೆಯಾಗಿ ಎರಡು ಕ್ಯಾಂಪ್ ಮತ್ತು ಹನ್ನೊಂದು ಗಣಿಗಳಲ್ಲಿ ಒಟ್ಟು 745 ಅನಕ್ಷರಸ್ತರನ್ನು ಗುರುತಿಸಲಾಯಿತು. ಶಿಕ್ಷಕ ಸ್ವಯಂ ಸೇವಕರಿಗೆ (40) ಒಂದು ವಾರದ ತರಬೇತಿಯನ್ನು ಕೊಡಲಾಯಿತು. ಮೇಲೆ ತಿಳಿಸಿದ ಕ್ಯಾಂಪ್ - ಗಣಿಗಳಲ್ಲಿ ತರಗತಿಗಳನ್ನು ಪ್ರಾರಂಭಿಸಲಾಯಿತು. ಸದರಿ ಶಿಕ್ಷಣಕ್ಕಾಗಿ ಊಟದ ಸಮಯವನ್ನು 30 ರಿಂದ 60 ನಿಮಿಷಕ್ಕೆ ಹೆಚ್ಚಿಸಲಾಯಿತು. ಅನಕ್ಷರಸ್ತರಿಗೆ ಅಕ್ಷರ ಜ್ಞಾನ ಮತ್ತು ಲೆಕ್ಕಗಳನ್ನು ಹೇಳಿ ಕೊಡಲಾಯಿತು. ಎಂಟರಿಂದ ಹತ್ತು ತಿಂಗಳಲ್ಲಿ ಅವರನ್ನು ನವ ಸಾಕ್ಷರರನ್ನಾಗಿ ಪರಿವರ್ತಿಸಲಾಯಿತು. ತರಬೇತಿ, ಬೋಧನಾ ಸಾಮಗ್ರಿ, ಮೇಲ್ವಿಚಾರಣೆ ಮುಂತಾದವುಗಳ ಖರ್ಚನ್ನು ಸಂಸ್ಥೆಯಿಂದ ಭರಿಸಲಾಯಿತು. ಈ ಪ್ರಕ್ರಿಯೆ ಉತ್ತಮ ಫಲಿತಾಂಶವನ್ನು ನೀಡಿತು.

ಕಲ್ಯಾಣ ಕಾರ್ಯಕ್ರಮಗಳು :- ಉದ್ಯೋಗಿಗಳನ್ನು, ಕಾರ್ಮಿಕರನ್ನು ಆಕರ್ಷಿಸಲು, ಇದ್ದವರನ್ನು ಉಳಿಸಿಕೊಳ್ಳಲು ಅವರ ಜೀವನವನ್ನು ಸುಗಮಗೊಳಿಸಲು ಕಂಪನಿಯ ಹತ್ತು ಕಾನೂನು ಬದ್ಧ ಮತ್ತು ಮೂವತ್ತು ಕಾನೂನೇತರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಎರಡನೇ ಗುಂಪಿನಲ್ಲಿ ರಿಯಾಯಿತಿ ದರದಲ್ಲಿ ಆಹಾರ ಧಾನ್ಯ ವಿತರಣೆ, ಶಿಷ್ಯವೇತನ, ಪಿಂಚಣಿ ಯೋಜನೆ, ರಿಯಾಯಿತಿ ದರದಲ್ಲಿ ಅಡುಗೆ ಅನಿಲ, ವೈದ್ಯಕೀಯ ಭತ್ಯೆ, ದೀರ್ಘವ್ಯಾದಿ ಉದ್ಯೋಗಿಗಳಿಗೆ ಆರು ತಿಂಗಳು ಅರ್ಧ ಸಂಬಳ, ಕುಟುಂಬ ಯೋಜನೆ ಭತ್ತೆ, ಗೃಹಸಾಲ, ಶಾಲೆಗಳು, ಅಂಗನವಾಡಿಗಳು, ಫೆಲೋಷಿಪ್‍ಗಳು, ಶವ ಸಂಸ್ಕಾರ ಭತ್ತೆ ಮುಂತಾದ ಅನೇಕ ಕಾರ್ಯಕ್ರಮಗಳು ಸೇರಿವೆ. ಇವು ಸದರಿ ಗಣಿ ವಲಯದಲ್ಲಿ ತುಂಬಾ ಪ್ರಸಿದ್ಧಿಯಾಗಿವೆ.

ಕನ್ನಡಪರ ಕೆಲಸಗಳು :-
  1. ಸ್ಮಯೋರ್ ಕಂಪನಿಯ ಮಾಲೀಕರು ಕಾಲಕಾಲಕ್ಕೆ ಕನ್ನಡ ಸಾಹಿತ್ಯವನ್ನು ಬೆಂಬಲಿಸಿದ್ದಾರೆ. ಸಂಸ್ಥೆಯ ಪ್ರಥಮ ಅಧ್ಯಕ್ಷರಾಗಿದ್ದ ಶ್ರೀಮಾನ್ ಯಶವಂತರಾವ್ ಘೋರ್ಪಡೆ (ಸಂಡೂರು ಸಂಸ್ಥಾನದ ಮಹಾರಾಜರು) ಯವರು, 1938ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು ಮಾಡಿ, ಸಮ್ಮೇಳನದ ಮಾರ್ಗದರ್ಶನ ಮಾಡಿದ್ದಾರೆ. ಹಾಗೇನೇ ಸಂಸ್ಥೆಯ ಎರಡನೇಯ ಅಧ್ಯಕ್ಷರಾಗಿದ್ದ ಡಾ|| ಎಂ.ವೈ. ಘೋರ್ಪಡೆಯವರು ಸಂಡೂರು ಮತ್ತು ಮರಿಯಮ್ಮನಹಳ್ಳಿಯಲ್ಲಿ ನಡೆದ ಜಿಲ್ಲಾ ಸಮ್ಮೇಳನಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಉದಾರವಾಗಿ ಖರ್ಚನ್ನು ಭರಿಸಿದ್ದಾರೆ. ಈ ಲೇಖಕನೂ ಅನೇಕ ಜಿಲ್ಲೆ ತಾಲೂಕು ಸಾಹಿತ್ಯ ಸಮ್ಮೇಳನಗಳಲ್ಲಿ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದಾನೆ, ಪ್ರಬಂಧ ಮಂಡನೆ ಮಾಡಿದ್ದಾನೆ.
  2. ರಾಷ್ಟ್ರೀಯ ಸಾಕ್ಷರತಾ ಮಿಷಿನ್ನಿನ ಮಾರ್ಗದರ್ಶನದಲ್ಲಿ, 1990-1995 ಮಧ್ಯೆ, ಕರ್ನಾಟಕದಲ್ಲಿ ಕೆಲವು ಜಿಲ್ಲೆಗಳಲ್ಲಿ ಸಾಕ್ಷರತಾ ಆಂದೋಲನಗಳನ್ನು ಹಮ್ಮಿಕೊಳ್ಳಲಾಗಿತ್ತು. ಬಳ್ಳಾರಿ ಜಿಲ್ಲೆಯಲ್ಲಿ 1994-1995ರಲ್ಲಿ ಆಂದೋಲನವನ್ನು ಪ್ರಾರಂಭಿಸಲಾಯಿತು. ಜಿಲ್ಲಾ ಸಾಕ್ಷರತಾ ಸಮಿತಿಗೆ ಒಬ್ಬ ಕಾರ್ಯದರ್ಶಿ ಬೇಕಾಗಿತ್ತು. ಸ್ಮಯೋರ್ ಸಂಸ್ಥೆಯ ಮುಖ್ಯಸ್ಥರಾದ ಮತ್ತು ಗ್ರಾಮೀಣ ಹಾಗೂ ಪಂಚಾಯಿತಿ ರಾಜ್ಯ ಸಚಿವರಾಗಿದ್ದ ಡಾ|| ಎಂ.ವೈ. ಘೋರ್ಪಡೆಯವರು, ಜಿಲ್ಲಾಧಿಕಾರಿಗಳ ವಿನಂತಿಯ ಮೇರೆಗೆ ಈ ಪ್ರಬಂಧದ ಲೇಖಕನನ್ನು ಎರಡು ವರ್ಷ ಡಿಪುಟೇಷನ್ ಆಧಾರದ ಮೇಲೆ ಕಳಿಸಿದ್ದರು. ಜಿಲ್ಲೆಯಲ್ಲಿ ಇದು ಬಹಳ ಮೆಚ್ಚುಗೆಯನ್ನು ಪಡೆದಿತ್ತು.

ಮಾನವ ಸಂಪನ್ಮೂಲ ಮತ್ತು ಕಲ್ಯಾಣ ಕಾರ್ಯಕ್ರಮಗಳು :- ಬಳ್ಳಾರಿ - ಹೊಸಪೇಟೆ ಗಣಿ ವಲಯದಲ್ಲಿ ಇರುವ ಇತರೆ ಗಣಿ ಕಂಪನಿಗಳಲ್ಲಿ ಇರುವಂತೆ, ಸ್ಮಯೋರ್ನಲ್ಲಿ ಈ ಎರಡೂ ಕಾರ್ಯಕ್ಷೇತ್ರದಲ್ಲಿ ನೀತಿ ನಿಯಮಗಳಿವೆ. ಸಂಸ್ಥೆಯ ತತ್ವಾದರ್ಶ, ನೀತಿಗಳು, ಧೋರಣೆಗಳು, ಕಾನೂನುಗಳು, ಪದ್ಧತಿಗಳು, ನೇಮಕಾತಿ-ಭಡ್ತಿ ನಿಯಮಗಳು, ಮಜೂರಿ ಆಡಳಿತ, ನಿವೃತ್ತಿ ಅನುಕೂಲಗಳು, ಪಿಂಚಣಿ, ವೈದ್ಯಕೀಯ ಸೌಲಭ್ಯ, ದೀರ್ಘ ವ್ಯಾಧಿ ಯೋಜನೆ, ಮನೆ ಭತ್ತೆ ನಿಯಮ ಮುಂತಾದ ಹಲವು ಹತ್ತು ವಿಚಾರಗಳ ಬಗ್ಗೆ ಸ್ಪಷ್ಟ, ಲಿಖಿತ ನೀತಿ ಮತ್ತು ನಿಯಮಗಳಿವೆ. ಅವುಗಳನ್ನು ಜಾರಿಗೂ ತರಲಾಗುತ್ತಿದೆ, ಇವು ಕಾನೂನಾತ್ಮಕ ಕಲ್ಯಾಣ ಕಾರ್ಯಗಳ ಹೊರತಾಗಿವೆ. ನಾನು ಈ ಲೇಖನದಲ್ಲಿ ಅವುಗಳ ಬಗ್ಗೆ ಹೆಚ್ಚಿಗೆ ಹೇಳುವ ಗೊಂದಲದಲ್ಲಿ ಸಿಕ್ಕಿಕೊಳ್ಳದೆ, ಸಂಸ್ಥೆಯ ಕೆಲವು ವಿಶೇಷ ಅಂಶಗಳ ಮೇಲೆ ಮಾತ್ರ ಬೆಳಕು ಚೆಲ್ಲಲು ಪ್ರಯತ್ನಿಸಿದ್ದೇನೆ.

ಸಿ.ಆರ್. ಗೋಪಾಲ್
ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸ್ಮಯೋರ್ (SMIORE)
0 Comments



Leave a Reply.


    Categories

    All
    Announcement
    Case Studies
    Contract Labour
    ESI
    Excel Training
    Factories Act
    General
    Google Group
    HR Jobs
    HR Training
    HR Videos
    HR Workplace Solutions
    Human Resource
    Industrial Relations
    Interviews
    Labour Law
    Latest Notifications
    Model Forms And Precedents
    Personality Development
    PF Act
    PoSH (Sexual Harassment)
    Powerpoint Training
    ಕನ್ನಡ ಲೇಖನಗಳು

    Archives

    May 2022
    April 2022
    January 2022
    May 2021
    April 2021
    March 2021
    December 2020
    September 2020
    July 2020
    June 2020
    May 2020
    April 2020
    March 2020
    October 2019
    April 2019
    January 2019
    August 2018
    June 2018
    December 2017


    Picture

    Inviting Articles

    More details

    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    M&HR Solutions Private Limited

    ​List Your Product on Our Website


    RSS Feed


    Human Resources And Labour Law Classes



Site

  • Home
  • About Us
  • Leader's Talk
  • HR Blog
  • Find Freelance Jobs
  • Current Job Openings
  • Videos
  • Join HR Online Groups
ONLINE STORE
Vertical Divider
JOIN HR ONLINE GROUPS 
Picture
20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
Join HR Online Groups
Vertical Divider

Contact Us

No. 326, 2nd Floor, Opp. Canara Bank, Near Dr. AIT College, Kengunte, Mallathahalli, Bangalore - 560 056
  • 080-23213710, +91-8073067542
  • E-mail - hrniratanka@mhrspl.com
Our Other Websites:
  • www.nirutapublications.org
  • www.niratanka.org

Copyright : MHRSPL-2021, website designed and developed by : www.nirutapublications.org