ಮಾನವ ಸಂಪನ್ಮೂಲ ಕ್ಷೇತ್ರದ, ಕಾರ್ಯ ನಿರ್ವಹಣೆ ಮತ್ತು ತರಬೇತಿ ವಲಯಗಳಲ್ಲಿ, ಅಂತರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಗಳಿಸಿದ, ಮಿತ್ರ ಶ್ರೀ ಲಕ್ಷ್ಮೀಪ್ರಸಾದ್‌ರವರು ಬರೆದ ‘ಬದುಕಿನಾನಂದ ಕಲೆ’ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಒಂದು ಉತ್ತಮ ಕೃತಿಯಾಗಿದೆ. ತಮ್ಮ ಅಪಾರವಾದ ಜ್ಞಾನ ಮತ್ತು ಅನುಭವಗಳನ್ನು ಕ್ರೋಢೀಕರಿಸಿ, ದೈನಂದಿನ ಬದುಕಿಗೆ ಉಪಯುಕ್ತವಾಗುವ ವಿಷಯವನ್ನು ಆರಿಸಿಕೊಂಡು, ಸರಳ ಭಾಷೆಯಲ್ಲಿ ಸುಂದರವಾಗಿ ಪುಸ್ತಕವನ್ನು ರಚಿಸಿದ್ದಾರೆ. ಬದುಕಿನಾನಂದ ಕಲೆ ಎಂಬ ಪದಗುಚ್ಚ, ಬದುಕು, ಆನಂದ ಮತ್ತು ಕಲೆ ಎಂಬ ಮೂರು ಶಬ್ದಗಳಿಂದ ಕೂಡಿದೆ. ಬದುಕು ಎಂದರೆ ಜೀವನ ಅಥವಾ ಬಾಳುವೆ. ಸಂತೋಷ ಶಬ್ದಕ್ಕೆ ಹಿಗ್ಗು, ಉಲ್ಲಾಸ, ಹರ್ಷ, ಸಂತಸ, ನಲಿವು ಮುಂತಾದ ಅರ್ಥಗಳಿವೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಆನಂದವೆಂದರೆ ಅಪರಿಮಿತ ಸಂತೋಷ, ಸದಾಕಾಲ ಇರುವ ಸಂತಸ, ನಿರಂತರವಾದ ಉಲ್ಲಾಸ. ಸಂತೋಷಕ್ಕೆ ಇತಿಮಿತಿಗಳಿವೆ. ಆದರೆ ಆನಂದಕ್ಕೆ ಇತಿಮಿತಿಗಳಿಲ್ಲ. ಅದು ಅಪರಿಮಿತ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಸಾಧಿಸಬೇಕಾದ ಒಂದು ಉದಾತ್ತ ಧ್ಯೇಯ. ಅಂತಹ ಬದುಕಿನ ಮಹದುದ್ದೇಶವನ್ನು ಸಾಧಿಸಲು ನಿರಂತರ ಹಾಗೂ ಪ್ರಾಮಾಣಿಕ ಪ್ರಯತ್ನ ಬೇಕಾಗುತ್ತದೆ. ಹಾಗೇನೇ ಇನ್ನೂ ಅನೇಕ ಗುಣಗಳನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಅದೊಂದು ಕಲೆ, ಕುಶಲತೆ, ಕೌಶಲ್ಯ. ಅದನ್ನು ಸಾಧಿಸುವುದೇ ಜೀವನದ ಪರಮ ಧ್ಯೇಯವಾಗಬೇಕು. ಡಾ. ಡಿ.ವಿ. ಗುಂಡಪ್ಪನವರು ತಮ್ಮ ಮೇರು ಕೃತಿಗಳಲ್ಲಿ ಒಂದಾದ ‘ಮಂಕುತಿಮ್ಮನ ಕಗ್ಗ’ ದಲ್ಲಿ ಬದುಕಿನ ಕಲೆಯ ಬಗ್ಗೆ ಹೀಗೆ ಹೇಳುತ್ತಾರೆ.
ಜೀವನವದೊಂದು ಕಲೆ; ಕಲೆಯ ಕಲಿಸುವುದೆಂತು? | ಸಾವಿರದ ನಿಯಮ ಯುಕ್ತಿಗಳನೊರೆದೊಡೆಯಂ || ಆವುದೋ ಕುಶಲತೆಯೊಂದಿರದೆ ಜಯವಿರದು | ಆ ವಿವರ ನಿನ್ನೊಳಗೆ - ಮಂಕುತಿಮ್ಮ || ಜೀವನ ಒಂದು ಕೌಶಲ್ಯ. ಅದನ್ನು ಕಲಿಸುವುದು ಹೇಗೆ? ಮನುಷ್ಯನ ಬದುಕಿಗೆ ಸಾವಿರ ನಿಯಮಗಳಿವೆ ಹಾಗೂ ಯುಕ್ತಿಗಳಿವೆ. ಶಾಸ್ತ್ರಗಳಿಂದ ನಿಯಮಗಳನ್ನು ಕಷ್ಟಪಟ್ಟು ತಿಳಿದುಕೊಳ್ಳಬಹುದು. ಅದನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಅನೇಕ ಅಡಚಣೆಗಳಿವೆ. ಮೊದಲನೆಯ ಅಡ್ಡಿಯೆಂದರೆ ನಮ್ಮ ಮನಸ್ಸೆ, ನಮ್ಮನ್ನು ಕಿತ್ತು ತಿನ್ನುವ ಅರಿಷಡ್ವರ್ಗಗಳೆ. ಜೀವನದ ಸೂತ್ರಗಳನ್ನು ಅಳವಡಿಸಿಕೊಳ್ಳಲು ಮನಸ್ಸು ಬಿಡುವುದಿಲ್ಲ. ಅದು ಸ್ವಾರ್ಥದ ಕಡೆಗೆ ಪ್ರೇರೇಪಿಸುತ್ತದೆ. ಸಮಾಜದಲ್ಲಿ ಬಾಳುವ ಮನುಷ್ಯನಿಗೆ ವಿನಯ, ತಾಳ್ಮೆ, ಸಹಬಾಳ್ವೆ, ಹೊಂದಾಣಿಕೆ, ತ್ಯಾಗ ಇತ್ಯಾದಿ ಹತ್ತಾರು ಮೌಲ್ಯಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಸನಾತನ ನಿಯಮಗಳ ಜೊತೆಗೆ, ಸಂದರ್ಭಕ್ಕೆ ಹಾಗೂ ಸಮಾಜಕ್ಕೆ ಹೊಂದಿಕೊಂಡು ಹೋಗುವಂತಹ ಒಂದು ಸುವರ್ಣ ಮಾಧ್ಯಮದ ದಾರಿಯನ್ನು ಕಂಡುಕೊಳ್ಳಬೇಕಾಗುತ್ತದೆ. ಈ ಕಂಡುಕೊಳ್ಳುವ ಪ್ರಕ್ರಿಯೆಯೇ ಒಂದು ಕಲೆ. ಅಂತಹ ಪ್ರಯತ್ನಕ್ಕೆ ಜಾಣ್ಮೆ ಬೇಕು, ಕುಶಲತೆ ಬೇಕು, ತಾಳ್ಮೆ ಬೇಕು. ಆ ಕುಶಲತೆಯನ್ನು ಪ್ರತಿಯೊಬ್ಬರೂ ಕಂಡುಕೊಳ್ಳಬೇಕು. ಅದನ್ನು ಯಾವ ಶಾಲಾ ಕಾಲೇಜುಗಳಲ್ಲಿ ಕಲಿಸಲಾಗುವುದಿಲ್ಲ. ಯಾರೂ ಹೇಳಿಕೊಡುವುದಿಲ್ಲ. ಅಂತಹ ಕುಶಲತೆಯನ್ನು ಲಕ್ಷ್ಮೀಪ್ರಸಾದ್ ರವರು ತಮ್ಮ ಈ ಕೃತಿಯಲ್ಲಿ ಸಾಧಿಸಿದ್ದಾರೆ. ಬದುಕಿನಾನಂದ ಕಲೆ ಹೊತ್ತಿಗೆಯನ್ನು ವಿಷಯ, ಭಾಷೆ ಹಾಗೂ ನಿರೂಪಣೆ ಎಂದು ವಿಭಾಗಿಸಿಕೊಂಡು ಪರಾಮರ್ಶೆ ಮಾಡಬಹುದಾಗಿದೆ. ವಿಷಯ ಸಂಗ್ರಹ ಸಮೃದ್ಧವಾಗಿದೆ ಹಾಗೂ ಸಮಂಜಸವಾಗಿದೆ. ತಮಗೆ ಅವಶ್ಯಕವಾಗುವ ಮಾಹಿತಿಯನ್ನು ಸಂಸ್ಕೃತ ಸಾಹಿತ್ಯದಿಂದ, ಸಂಪ್ರದಾಯ - ಪದ್ಧತಿಗಳಿಂದ, ಮಾನವ ಸಂಪನ್ಮೂಲ ಸಿದ್ಧಾಂತದಿಂದ, ಪಾಶ್ಚಾತ್ಯ ಚಿಂತನೆಗಳಿಂದ ಹಾಗೂ ತಮ್ಮ ಅನುಭವದಿಂದ ಹೆಕ್ಕಿ ತೆಗೆದಿದ್ದಾರೆ. ಈ ಎಲ್ಲಾ ಮೂಲಗಳಿಂದ ಪಡೆದ ಜ್ಞಾನಭಂಡಾರವನ್ನು ತಮ್ಮ ಪುಸ್ತಕದಲ್ಲಿ ಔಚಿತ್ಯಪೂರ್ಣವಾಗಿ ಎರಕ ಹೊಯ್ದಿದ್ದಾರೆ. ಅವರು ತಮಗಿರುವ ಕೈಗಾರಿಕಾ ಕ್ಷೇತ್ರದ ಹೆಚ್ಚಿನ ಉದಾಹರಣೆಗಳನ್ನು ಬಳಸಿದ್ದರೂ, ಅವುಗಳು ಬದುಕಿನ ಇತರ ಕ್ಷೇತ್ರಗಳಿಗೆ ಹಾಗೂ ಆಯಾಮಗಳಿಗೆ ಬಹಳ ಸಮಂಜಸವಾಗಿ ಅನ್ವಯಿಸಬಹುದಾಗಿದೆ. ಈ ಗ್ರಂಥದಲ್ಲಿ ವ್ಯಾಖ್ಯಾನಕ್ಕೆ-ವಿವರಣೆಗೆ ಬಳಸಿಕೊಂಡ ವಿಷಯಗಳನ್ನು ಅವರು ವಿಭಾಗಗಳನ್ನಾಗಿ / ಅಧ್ಯಾಯಗಳನ್ನಾಗಿ ವಿಂಗಡಿಸಿಕೊಂಡಿರುವುದು ಸಂಗತವಾಗಿದೆ. ನಾವು ಏಕೆ ಕೆಲಸ ಮಾಡಬೇಕು, ಕೆಲಸ ಮಾಡುವಾಗ ಯಾವ ಭಯವನ್ನು ತ್ಯಜಿಸಬೇಕು, ನಮ್ಮ ಶತೃಗಳು ಯಾರು ಮತ್ತು ಅವರನ್ನು / ಅವುಗಳನ್ನು ಹೇಗೆ ಜಯಿಸಬೇಕು, ಸುಂದರ ಬದುಕಿಗಾಗಿ ಸಕಾರಾತ್ಮಕ ಗುಣಗಳನ್ನು ಬೆಳೆಸಿಕೊಳ್ಳುವ ಬಗೆ ಏನು, ನಮ್ಮಲ್ಲಿರುವ ಅದ್ಭುತ ಸಂಪನ್ಮೂಲಗಳನ್ನು ಹೇಗೆ ವಿನಿಯೋಗಿಸಿಕೊಳ್ಳಬೇಕು ಮತ್ತು ಉತ್ತಮ ಜೀವನಕ್ಕೆ ಸರ್ವಶ್ರೇಷ್ಠ ಮಾರ್ಗಗಳು ಯಾವುವು? ಮುಂತಾದ ಅರ್ಥಪೂರ್ಣ ವಿಚಾರಗಳನ್ನು ತಮ್ಮ ವ್ಯಾಖ್ಯಾನಕ್ಕಾಗಿ ಆರಿಸಿಕೊಂಡಿದ್ದಾರೆ. ಪುಸ್ತಕದ ಮೊದಲನೆ ಭಾಗದಲ್ಲಿ ಕೆಲಸ, ದುಡಿಮೆಯ ಮಹತ್ವ, ದಾಹ, ಟೀಕೆ ಮತ್ತು ವೃದ್ಧಾಪ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ದುಡಿಮೆಯ ಮಹತ್ವ, ಪ್ರಾಮಾಣಿಕ ಹಾಗೂ ನಿರಂತರ ದುಡಿಮೆ, ಫಲಾಪೇಕ್ಷೆಯಿಲ್ಲದ ಕರ್ತವ್ಯ ನಿರ್ವಹಣೆ, ದುಡಿಮೆಯಿಂದ ಸಿಗುವ ಸಮಾಧಾನ ಹಾಗೂ ಗೌರವಗಳನ್ನು ಭಾಷೆಯಿಂದ ಹೇಳಲು ಆಗುವುದಿಲ್ಲ. ಅವುಗಳಲ್ಲಿ ಸಿಗುವ ಆನಂದವನ್ನು ಅನುಭವಿಸಿಯೇ ಸವಿಯಬೇಕು. ಒಳ್ಳೆಯ ಕೆಲಸ ಅಂತ ಹುಡುಕಬೇಡಿ, ಸಿಕ್ಕ ಕೆಲಸವನ್ನು ಉತ್ತಮವಾಗಿ ಮಾಡಿ. ಅದರಿಂದ ತೃಪ್ತಿ ಪಡೆಯಿರಿ. ಉದ್ಯೋಗದಿಂದ ಬದುಕಿಗೆ ಬೇಕಾದ ಹಣ ಸಿಕ್ಕೇ ಸಿಗುತ್ತದೆ. ಹಾಗೇನೇ ಸಮಯವನ್ನು ಕಳೆದುಕೊಳ್ಳಬೇಡಿ. ಕಳೆದುಹೋದ ಸಮಯ ಮತ್ತೆ ಬರುವುದಿಲ್ಲ. ಆಯಾಯ ಕಾಲಕ್ಕೆ ನಿಮ್ಮ ಕೆಲಸಗಳನ್ನು ಮಾಡುವುದೇ ಜಾಣತನ. ಎಂತಹ ಅನುಭವದ ಮಾತು. ದಾಹಗಳು ಅನೇಕ ಬಗೆ. ಅವುಗಳಿಂದ ಆಗುವ ಅನಾಹುತಗಳನ್ನು ಸರಿಯಾಗಿಯೇ ಗುರುತಿಸಿದ್ದಾರೆ. ಟೀಕೆಗಳನ್ನು ಸ್ವೀಕರಿಸಿ. ಅವುಗಳಿಂದ ಕಲಿಯಿರಿ. ನೀವು ನಿಮ್ಮ ಇತಿಮಿತಿಯಲ್ಲಿದ್ದರೆ ಟೀಕೆಗಳು ಕಡಿಮೆ. ವೃದ್ಧಾಪ್ಯ ಅನಿವಾರ್ಯ. ವೃದ್ಧಾಪ್ಯದಲ್ಲಿ ನಿಮ್ಮ ಅವಶ್ಯಕತೆಗಳನ್ನು ಮಿತಗೊಳಿಸಿ. ಚಟುವಟಿಕೆಯಿಂದಿರಿ. ಆರೋಗ್ಯ ಮನಸ್ಸುಗಳು ತೃಪ್ತಿಕರವಾಗಿರುತ್ತವೆ. ಮರಣವನ್ನು ನಗುತ್ತಾ ಸ್ವೀಕರಿಸಿ. ಮಾಗಿದ ಮನಸ್ಸು ಮಾತ್ರಾ ಇಂತಹ ಮಾತುಗಳನ್ನು ಹೇಳಲು ಸಾಧ್ಯ. ಮುಂದಿನ ಭಾಗಗಳಲ್ಲಿ ಅರಿಷಡ್ವರ್ಗಗಳ ಹಾವಳಿ, ಅವುಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಬಗೆ ಇತ್ಯಾದಿಗಳ ಬಗ್ಗೆ ಉದಾಹರಣೆಗಳನ್ನು ಕೊಡುತ್ತಾ, ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾರೆ. ಹಾಗೇನೇ ಸಕಾರಾತ್ಮಕ ಮನೋಭಾವ, ಸೋಲನ್ನು ಒಪ್ಪಿಕೊಳ್ಳದಿರುವ ಛಲ, ಮುಂದಾಲೋಚನೆ, ವ್ಯಕ್ತಿಯ ಇತಿಮಿತಿಗಳು, ಅನಾವಶ್ಯಕ ಟೀಕೆ ಮುಂತಾದವುಗಳ ಬಗ್ಗೆ ಹೃದಯಂಗಮವಾಗಿ ವಿವರಿಸಿದ್ದಾರೆ. ಸಕಾರಾತ್ಮಕ ಮನೋಭಾವವನ್ನು ಯಾರೂ ನಿಮಗೆ ಹೇಳಿಕೊಡುವುದಿಲ್ಲ. ನೀವೇ ಅದನ್ನು ಬೆಳೆಸಿಕೊಳ್ಳಬೇಕು. ಮುಂದಾಲೋಚನೆಯಿಂದ ನೀವು ಇತರರಿಗಿಂತ ಮುಂದೆ ಇರಬೇಕಾಗುತ್ತದೆ. ನಿಮ್ಮ ಜ್ಞಾನ ಹಾಗೂ ಅನುಭವಗಳ ಹಿನ್ನಲೆಯಲ್ಲಿ ನಿಮ್ಮ ಇತಿಮಿತಿಗಳನ್ನು ತಿಳಿದುಕೊಳ್ಳಿ. ನನಗೆ ಬಹಳ ಇಷ್ಟವಾದದ್ದು, ಅವರ ‘ಇಷ್ಟಪಟ್ಟು ಕೆಲಸ ಮಾಡಿ’ಎನ್ನುವ ವಾಕ್ಯ. ಆನಂತರದ ಅಧ್ಯಾಯದಲ್ಲಿ, ನಿಮ್ಮ ಕೈಕಾಲುಗಳು, ಕಣ್ಣು, ಮುಖ, ಮನಸ್ಸು, ಬುದ್ಧಿ, ಹೃದಯಗಳನ್ನು ರಚನಾತ್ಮಕವಾಗಿ ಬಳಸಿಕೊಳ್ಳುವ ತಂತ್ರಗಳನ್ನು ಒಂದೊಂದಾಗಿ ಬಿಚ್ಚಿಟ್ಟಿದ್ದಾರೆ. ಈ ಅಂಗಗಳ ಸದ್ವಿನಿಯೋಗದ ಬಗ್ಗೆ ತಮ್ಮ ಕಳಕಳಿಯನ್ನು ವ್ಯಕ್ತಪಡಿಸುತ್ತಾರೆ. ಪುಸ್ತಕದ ಅಂತಿಮ ಭಾಗದಲ್ಲಿ ಭಗವಾನ್ ಬುದ್ಧರು ಪ್ರತಿಪಾದಿಸಿದ ಉತ್ತಮ ಜೀವನಕ್ಕೆ ಬೇಕಾದ ಶ್ರೇಷ್ಠಪದಗಳನ್ನು ಓದುಗರಿಗೆ ಪರಿಚಯಿಸುತ್ತಾರೆ. ನಂಬಿಕೆಯ ಮಹತ್ವ, ಸಕಾರಾತ್ಮಕ ಮತ್ತು ಅರ್ಥಪೂರ್ಣ ಚಿಂತನೆಗಳ ಪ್ರಾಮುಖ್ಯತೆ ಮತ್ತು ಪರಿಣಾಮ, ಸ್ವಾರ್ಥರಹಿತ ಕ್ರಿಯೆ, ಮಾತಿನ ಮಹತ್ವ, ಪರಿಪೂರ್ಣ ಜೀವನ, ಆತ್ಮವಿಶ್ವಾಸ ಮುಂತಾದ ಮೌಲ್ಯಗಳ ಬಗ್ಗೆ ವಿವರಣೆ ಕೊಡುತ್ತಾರೆ. ಮನುಷ್ಯನ ಬದುಕಿನಲ್ಲಿ ನಂಬಿಕೆಯ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ. ನಿಮ್ಮ ಚಿಂತನೆ, ಕ್ರಿಯೆ, ವರ್ತನೆ, ಸಂಬಂಧಗಳು, ಅಷ್ಟೇ ಏಕೆ ಇಡೀ ಬದುಕೇ ನಿಮ್ಮ ನಂಬಿಕೆಯ ಮೇಲೆ ನಿಂತಿರುತ್ತದೆ. ಹಾಗಾಗಿ ನಿಮ್ಮ ನಂಬಿಕೆ / ಚಿಂತನೆ ಸಕಾರಾತ್ಮಕವಾಗಿರಬೇಕು. ನಿಮ್ಮ ಆಸೆ ಆಕಾಂಕ್ಷೆಗಳು ವಾಸ್ತವವಾಗಿರಬೇಕು. ಅವುಗಳಿಗೆ ಒಂದು ಮಿತಿ ಇರಬೇಕು. ಅತಿ ಆಸೆ ಗತಿಗೇಡು ಎಂಬ ಮಾತು ನಮಗೆಲ್ಲಾ ಗೊತ್ತಿದೆ. ಆಲೋಚನೆಗಳು ಉನ್ನತಿಯ ಕಡೆಗಿರಬೇಕು. ಸಾಮರಸ್ಯದ ಕಡೆಗಿರಬೇಕು. ಕ್ರಿಯೆಗಳು ವ್ಯಷ್ಠಿ ಮತ್ತು ಸಮಷ್ಠಿ ಹಿತವನ್ನು ಕಾಪಾಡುವಂತಿರಬೇಕು. ಸಮಾಜ ಘಾತುಕ ಆಗಿರಬಾರದು. ನಿಷ್ಠೆಯಿಂದ ಸರಿಯಾದ ಕೆಲಸ ಮಾಡಿದರೆ ಜೀವನ ಸುಖಮಯವಾಗುತ್ತದೆ. ನೀವು ಮಾಡುವ ಕೆಲಸಗಳಲ್ಲಿ ಏಕಾಗ್ರತೆ ಬೇಕು. ಪ್ರಕ್ರಿಯೆ ಪ್ರಾಮಾಣಿಕವಾಗಿರಬೇಕು. ಹಾಗೇನೇ ಮಾತು ಮಿತವಾಗಿರಬೇಕು, ಹಿತವಾಗಿರಬೇಕು, ನಯ-ವಿನಯದಿಂದ ಕೂಡಿರಬೇಕು, ನಿಷ್ಕಲ್ಮಷವಾಗಿರಬೇಕು. ಜೀವನದ ಪರಿಪೂರ್ಣತೆಗೆ ಶಾಂತಿ, ತೃಪ್ತಿ, ಆನಂದದಿಂದಿರಲು ಬದುಕಿನ ಮೌಲ್ಯಗಳನ್ನು ಗೌರವಿಸಬೇಕು. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಾನ್ಯ ಲಕ್ಷ್ಮೀಪ್ರಸಾದ್‌ರವರಿಗೆ ಇದನ್ನೆಲ್ಲಾ ಇಂದಿನ ಯುವ ಜನಾಂಗಕ್ಕೆ ಹೇಳಲು ಅಧಿಕಾರವಿದೆ. ಏಕೆಂದರೆ ಅವರು ಹಾಗೆ ಬದುಕಿ ತೋರಿಸಿದ್ದಾರೆ. ಸಾಧನೆಗೆ, ಸುಂದರ ಜೀವನಕ್ಕೆ, ಬದುಕಿನ ಆನಂದಕ್ಕೆ ಆತ್ಮವಿಶ್ಮಾಸ ಬಹಳ ಮುಖ್ಯ ಎಂದು ಹೇಳುವುದರೊಂದಿಗೆ ಪುಸ್ತಕ ಕೊನೆಗೊಳ್ಳುತ್ತದೆ. ಕೃತಿಕಾರರು ತಮ್ಮ ಚಿಂತನೆ ಮತ್ತು ಬರಹಗಳ ಮೂಲವನ್ನು, ಕೇಳಿದ್ದು, ಕಂಡದ್ದು, ಓದಿದ್ದು, ಅನುಭವಿಸಿದ್ದು, ಚಿಂತಿಸಿದ್ದು, ಇನ್ನೊಂದು ಕಡೆ ಬರೆದದ್ದು ಎಂದು ವಿಂಗಡಿಸಿರುವುದರ ಬಗ್ಗೆ ಪುಸ್ತಕದ ಪೀಠಿಕಾ ಭಾಗದಲ್ಲೇ ಹೇಳಿದ್ದಾರೆ. ಆ ಕಾರಣಕ್ಕಾಗಿ ಅವು ಹೆಚ್ಚು ವಾಸ್ತವಿಕ ಮತ್ತು ಸಮಂಜಸ. ಅವರ ಈ ಕ್ರೋಢೀಕರಣ ಪ್ರಕ್ರಿಯೆ ಬೆರಗು ಹುಟ್ಟಿಸುತ್ತದೆ. ಕೃತಿಯನ್ನು ಓದಿ ಮುಗಿಸುತ್ತಿದ್ದಂತೆ ಮನದಲ್ಲಿ ಅಪರೂಪವಾದ ಆಹ್ಲಾದಕರ ಮನೋಭಾವ ಮೂಡುವುದು ಖಂಡಿತ. ವ್ಯಕ್ತಿತ್ವವನ್ನು ಅಚ್ಚುಕಟ್ಟಾಗಿ ರೂಪಿಸಿಕೊಳ್ಳಬೇಕು ಎಂಬ ಗುರಿಯಿರುವ ಪ್ರತಿಯೊಬ್ಬ ವ್ಯಕ್ತಿಯು ಈ ಪುಸ್ತಕವನ್ನು ಓದಲೇಬೇಕು. ಅಂತವರಿಗೆ, ಈ ಕೃತಿ ದಿಕ್ಸೂಚಿಯಾಗಿ, ತಮ್ಮ ಗಮ್ಯಸ್ಥಾನವನ್ನು ತಲುಪಲು ಸಹಕರಿಸುತ್ತದೆ. ಮಿತ್ರ ಮಾನ್ಯ ಲಕ್ಷ್ಮೀಪ್ರಸಾದ್‌ರವರಿಗೆ, ಬಹುಶಃ ತಾವು ನಮ್ಮನ್ನು ಅಗಲಿಹೋಗುವ ಮುನ್ಸೂಚನೆ ಇದ್ದ ಕಾರಣದಿಂದಲೋ ಏನೋ, ತಮ್ಮೆಲ್ಲಾ ಅನುಭವವನ್ನು ಈ ಕೃತಿಯಲ್ಲಿ ಒಗ್ಗೂಡಿಸಿ, ತಮ್ಮ ನೆನಪು ನಮ್ಮಲ್ಲಿ ಸದಾಕಾರ ಉಳಿಯುವಂತೆ ಶ್ರಮಿಸಿದ್ದಾರೆ. ಈ ಕೃತಿಯ ಮೂಲಕ ಶ್ರೀಯುತರು ಪ್ರತಿಯೊಬ್ಬ ಓದುಗನಿಗೂ ಮಾರ್ಗದರ್ಶಕರಾಗಿ ಸಹಕರಿಸುತ್ತಾರೆ. ಇಂತಹ ವ್ಯಕ್ತಿತ್ವ ವಿಕಸದ ಕೃತಿಯನ್ನು ನೀಡಿದ ನನ್ನ ಮಿತ್ರ ಲಕ್ಷ್ಮೀಪ್ರಸಾದ್‌ರವರು ಎಲ್ಲೇ ಇರಲಿ, ದೇವರು ಅವರಿಗೆ ಒಳ್ಳೆಯದನ್ನು ಅನುಗ್ರಹಿಸಲೆಂದು ತುಂಬು ಹೃದಯದಿಂದ ಹಾರೈಸುತ್ತೇನೆ. 12-09-2021 ಡಾ. ಸಿ. ಆರ್.ಗೋಪಾಲ್
0 Comments
Leave a Reply. |
Archives
September 2024
Categories
All
HR Learning and Skill Building AcademyMHR LEARNING ACADEMYGet it on Google Play store
|
site map
SitePUBLICATIONSJob |
HR SERVICESOTHER SERVICESTraining |
POSHNGO & CSROur Other Website:subscribe |
30,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
Copyright : MHRSPL-2021, website designed and developed by : www.nirutapublications.org.