M&HR
  • HOME
  • About Us
  • HR Blog
  • POSH
    • Prevention of Sexual Harassment at Workplace (POSH) Online Training
    • Certificate course on Prevention of Sexual Harassment at Workplace (POSH)
    • Certificate course on Prevention of Sexual Harassment at Workplace (POSH)
    • POSH Training
  • Services
    • Domestic Enquiry
    • Payroll Services
  • HR Job Openings
  • HR Online Groups
  • Videos
  • Online Store
  • List Your Product on Our Website
  • SEARCH
  • Contact Us
    • Office Login
  • HOME
  • About Us
  • HR Blog
  • POSH
    • Prevention of Sexual Harassment at Workplace (POSH) Online Training
    • Certificate course on Prevention of Sexual Harassment at Workplace (POSH)
    • Certificate course on Prevention of Sexual Harassment at Workplace (POSH)
    • POSH Training
  • Services
    • Domestic Enquiry
    • Payroll Services
  • HR Job Openings
  • HR Online Groups
  • Videos
  • Online Store
  • List Your Product on Our Website
  • SEARCH
  • Contact Us
    • Office Login
M&HR

HR Blog 

ಕೈಗಾರಿಕಾ ವಿವಾದಗಳ ಕಾಯಿದೆ

12/4/2017

0 Comments

 
Picture
Buy
ಪರಿವಿಡಿ​
  1. ಕೈಗಾರಿಕಾ ವಿವಾದಗಳ ಕಾಯಿದೆ, 1947
    Industrial Disputes Act, 1947
  2. ಕೈಗಾರಿಕಾ ವಿವಾದಗಳ (ಕೇಂದ್ರೀಯ) ನಿಯಮಗಳು, 1957
    Industrial Disputes (Central) Rules, 1957
  3. ಕೈಗಾರಿಕಾ ವಿವಾದಗಳ ಕಾಯಿದೆ  (ಕರ್ನಾಟಕ) ನಿಯಮಗಳು), 1957
    Industrial Disputes (Karnataka) Rules, 1957
  4. ಕೈಗಾರಿಕಾ ವಿವಾದಗಳ (ಬ್ಯಾಂಕಿಂಗ್ ಮತ್ತು ಇನ್ಷೂರೆನ್ಸ್ ಕಂಪೆನಿಗಳ) ಕಾಯಿದೆ, 1949
    Industrial Disputes (Banking &  Insurance Companies) Act, 1949
  5. ಕೈಗಾರಿಕಾ ವಿವಾದಗಳ (ಬ್ಯಾಂಕಿಂಗ್ ಕಂಪೆನೀಸ್/ ಸಂಸ್ಥೆಗಳ) ನಿರ್ಧಾರ ಕಾಯಿದೆ, 1955
    Industrial disputes (Banking Companies) Decision Act, 1955
  6. ಕೈಗಾರಿಕಾ ನ್ಯಾಯಾಧಿಕರಣಗಳ (ಕಾರ್ಯವಿಧಾನದ) ನಿಯಮಗಳು, 1949
    Industrial Tribunal (Procedure) Rules, 1949
  7. ಕೈಗಾರಿಕಾ ನ್ಯಾಯಾಧಿಕರಣಗಳ (ಕೇಂದ್ರೀಯ ಕಾರ್ಯವಿಧಾನಗಳ) ನಿಯಮಗಳು, 1954
    Industrial Tribunal (Central Procedure) Rules, 1954
  8. ಕೈಗಾರಿಕಾ ನ್ಯಾಯಾಧಿಕರಣಗಳ (ಕರ್ನಾಟಕ ಕಾರ್ಯವಿಧಾನಗಳ) ನಿಯಮಗಳು, 1955
    ​Industrial Tribunal (Karnataka Procedure) Rules, 1955
Picture
For More Details
ಮುನ್ನುಡಿ
ಕಾರ್ಮಿಕರಿಗೆ ಅಥವಾ ಉದ್ಯೋಗಿಗಳಿಗೆ ಸಾಮಾಜಿಕ ಹಾಗೂ ಅರ್ಥಿಕ ನ್ಯಾಯವನ್ನು ಒದಗಿಸಲು ಭಾರತದ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಕಾಲದಿಂದ ಕಾಲಕ್ಕೆ ರೂಪಿಸಿದ ಶಾಸನಗಳನ್ನು ಕೈಗಾರಿಕಾ ಕಾಯಿದೆಗಳು ಎಂದು ಹೇಳುತ್ತಾರೆ.
 
ಸೂಕ್ತವೆನಿಸಿದ ಕಾರ್ಮಿಕ ಕಾಯಿದೆಗಳು ಮತ್ತು ನಿಯಮಗಳನ್ನು ರೂಪಿಸುವ ಸಂವಿಧಾನದತ್ತ ಅಧಿಕಾರ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡಕ್ಕೂ ಇರುವುದರಿಂದ ಬಹಳ ಹೆಚ್ಚಿನ ಸಂಖ್ಯೆಯ ಕಾರ್ಮಿಕ ಕಾಯಿದೆಗಳು ನಮ್ಮ ದೇಶದಲ್ಲಿ  ಜಾರಿಯಲ್ಲಿವೆ.
ಈ ಎಲ್ಲಾ ಕಾರ್ಮಿಕ ಕಾಯಿದೆಗಳಲ್ಲಿ ಸರಕಾರ, ಉದ್ಯೋಗಿಗಳು ಮತ್ತು ಉದ್ಯೋಗದಾತರ ನಡುವಣ ಸಂಬಂಧ, ಸಹಕಾರ, ಕೈಗಾರಿಕಾ ಬಾಂಧವ್ಯ, ಪರಸ್ಪರರ ಹಕ್ಕು-ಭಾದ್ಯತೆಗಳ  ಸಂರಕ್ಷಣೆ ಮತ್ತು ಅನುಷ್ಠಾನ, ಉದ್ಯೋಗ ಭದ್ರತೆ, ಕೆಲಸದ ಅವಧಿ, ವೇತನ, ಸಾಮಾಜಿಕ ಸುರಕ್ಷತೆ, ಉತ್ಪಾದನೆ, ಉತ್ಪಾದಕತೆ – ಇವೇ ಮುಂತಾದ ವಿಷಯಗಳಿಗೆ ಸಂಬಂಧಪಟ್ಟಂತೆ ಅತ್ಯಂತ ಪರಿಣಾಮಕಾರಿಯಾದ ಮತ್ತು ಮಹತ್ತರವಾದ ಕಾಯಿದೆಯೇ “ಕೈಗಾರಿಕಾ ವಿವಾದಗಳ ಕಾಯಿದೆ”
 
ಸ್ವಾತಂತ್ರ್ಯಾನಂತರದ ಭಾರತದ ಕೈಗಾರಿಕಾ ಕಾಯಿದೆಗಳು ಸ್ವಾತಂತ್ರ್ಯ ಸಂಗ್ರಾಮದ ಮಂಚೂಣಿಯಲ್ಲಿದ್ದ ರಾಷ್ಟ್ರೀಯ ನಾಯಕರುಗಳು, ಪ್ರತಿನಿಧಿ ಸಭೆ, ಭಾರತದ ಸಂವಿಧಾನ ಮತ್ತು ಅಂತರ್-ರಾಷ್ಟ್ರೀಯ ಒಡಂಬಡಿಕೆಗಳು ಮತ್ತು ಶಿಫಾರಸುಗಳಿಂದ ಪ್ರಭಾವಿತವಾಗಿವೆ.
 
ಮಾನವ ಸಂಪನ್ಮೂಲದ ಘನತೆ ಮತ್ತು ಗೌರವ ಮತ್ತು ಮಾನವ ಸಂಪನ್ಮೂಲವನ್ನು ಕಾಪಾಡಿಕೊಳ್ಳಬೇಕಾದ ಅವಶ್ಯಕತೆಗಳನ್ನು ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನಿರ್ದೇಶಕ ತತ್ವಗಳ ಆಶಯಕ್ಕೆ ಅನುಗುಣವಾಗಿ ಅಡಕಗೊಳಿಸಿಕೊಂಡಿದೆ.
 
ಕಾರ್ಮಿಕ ಕಾನೂನುಗಳು ಕೂಡಾ ವಿಶ್ವಸಂಸ್ಥೆಯ ಒಡಂಬಡಿಕೆಗಳು, ಮಾನವ ಸಂಪನ್ಮೂಲದ  ಸ್ಥಾನ-ಮಾನಗಳು  ಮತ್ತು ವಿಶ್ವಸಂಸ್ಥೆಯು ಪ್ರತಿಪಾದಿಸುವ ಪ್ರಮುಖ ಮಾನವ ಹಕ್ಕುಗಳಿಂದ ಪ್ರಭಾವಿತವಾಗಿವೆ. ವ್ಯಕ್ತಿಯೊಬ್ಬ ತನ್ನಿಚ್ಚೆಗೆ ಅನುಗುಣವಾದ ನೌಕರಿ ಅಥವಾ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು, ತಾರತಮ್ಯದ ವಿರುದ್ದದ ಹಕ್ಕುಗಳು, ಬಾಲ ಕಾರ್ಮಿಕ ಪದ್ದತಿಯ ನಿಷೇಧ,  ನ್ಯಾಯೋಚಿತವಾದ ಮತ್ತು ಮಾನವೀಯ ಅಂಶಗಳುಳ್ಳ ಸೇವಾ ಸ್ಥಿತಿ-ಗತಿಗಳು, ಸಾಮಾಜಿಕ ಸುರಕ್ಷತೆ, ವೇತನ ಸಂರಕ್ಷಣೆ, ಕುಂದು ಕೊರತೆಗಳ ನಿವಾರಣೆ, ಲೈಂಗಿಕ ದೌರ್ಜನ್ಯರಹಿತವಾದ ಉದ್ಯೋಗದ ಸ್ಥಳ, ಕಾರ್ಮಿಕ ಸಂಘಗಳ ರಚನೆ ಮತ್ತು ಭಾಗವಹಿಸುವಿಕೆಯಲ್ಲಿ ಉದ್ಯೋಗಿಗಳಿಗೆ ಇರುವ ಹಕ್ಕುಗಳು, ಸಾಮೂಹಿಕ ವ್ಯವಹರಿಸುವಿಕೆ/ಕಲೆಕ್ಟಿವ್ ಬಾರ್ಗೈನಿಂಗ್ ಮತ್ತು ಸಂಸ್ಥೆಯ ಆಡಳಿತದಲ್ಲಿ ಭಾಗವಹಿಸುವಿಕೆ - ಇವೇ ಮುಂತಾದವುಗಳು ಇದರಲ್ಲಿ ಸೇರಿವೆ.
 
ಅದೇ ರೀತಿಯಲ್ಲಿ ಭಾರತೀಯ ಕೈಗಾರಿಕಾ ಕಾಯಿದೆಗಳು ಅಂತರ್-ರಾಷ್ಟ್ರೀಯ ಕಾರ್ಮಿಕ ಸಂಸ್ಥೆ, ಭಾರತೀಯ ಕಾರ್ಮಿಕ ಸಮಾವೇಶಗಳ ನಡಾವಳಿಗಳು, ಅಂತರ್-ರಾಷ್ಟ್ರೀಯ ಕಾರ್ಮಿಕ ಸಮಾವೇಶಗಳ ನಡಾವಳಿಗಳು ಮತ್ತು ಭಾರತದ ಕಾರ್ಮಿಕ ಆಯೋಗಗಳ ಅಧ್ಯಯನ, ವರದಿ ಮತ್ತು ಶಿಫಾರಸುಗಳು ಮತ್ತು ಕಾಲದಿಂದ ಕಾಲಕ್ಕೆ ಭಾರತದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯ ಮತ್ತು ವಿವಿಧ ರಾಜ್ಯಗಳ ಗೌರವಾನ್ವಿತ ಉಚ್ಚ ನ್ಯಾಯಾಲಯಗಳು ಕೈಗಾರಿಕಾ ಕಾಯಿದೆಯ ಅಂಶಗಳಿಗೆ ಸಂಬಂಧಪಟ್ಟಂತೆ ನೀಡಿರುವ ತೀರ್ಪುಗಳಿಂದ ತುಂಬಾ ಪ್ರಭಾವಿತವಾಗಿವೆ.
 
ಕಾರ್ಮಿಕರು ಮತ್ತು ಬಂಡವಾಳದ ಮಧ್ಯೆ  ಒಂದು ಸ್ಪಷ್ಟವಾದ ಹೊಂದಾಣಿಕೆ/ಒಪ್ಪಂದ ಏರ್ಪಡಲೇ ಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆಯಿಂದಾಗಿ ಸ್ವಾತಂತ್ರ್ಯಪೂರ್ವದಲ್ಲಿದ್ದ ಶಾಸನಗಳಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಸ್ವಾತಂತ್ರ್ಯಾನಂತರ ಜಾರಿಗೆ ತರಲಾಯಿತು.ಇಂತಹ ಒಪ್ಪಂದವೊಂದರಲ್ಲಿ ಅಡಕಗೊಳ್ಳಬೇಕಾದ ವಿಚಾರಗಳನ್ನು 1947 ರ ಡಿಸೆಂಬರ್ ತಿಂಗಳಲ್ಲಿ ನಡೆದ ತ್ರಿಪಕ್ಷೀಯ ಸಮಾವೇಶದಲ್ಲಿ ಅನುಮೋದಿಸಲಾಯಿತು. 1948 ರಲ್ಲಿ ಸಮರ್ಪಕ ವೇತನ ಶ್ರೇಣಿಗಳನ್ನು ಗುರುತಿಸುವ ಕಾರ್ಯ ನಡೆದು ವೇತನವನ್ನು ಕನಿಷ್ಠ ವೇತನ, ಸಮರ್ಪಕ ವೇತನ ಮತ್ತು ಜೀವನಾವಶ್ಯಕ ವೇತನ ಎಂದು ಮೂರು ಭಾಗಗಳಾಗಿ ವರ್ಗೀಕರಿಸಲಾಯಿತು. ಬಹಳಷ್ಟು ಕೈಗಾರಿಕಾ ವಲಯಗಳಲ್ಲಿ ಸಾಮೂಹಿಕವಾಗಿ ವ್ಯವಹರಿಸುವಾಗ (ಕಲೆಕ್ಟಿವ್ ಬಾರ್ಗೈನಿಂಗ್) ಈ ರೀತಿಯ ವೇತನ ವರ್ಗೀಕರಣ ಬಳಕೆಯಲ್ಲಿರುವುದನ್ನು ಈಗಲೂ ನಾವು ಕಾಣಬಹುದು. ಈ ರೀತಿಯ ಹಕ್ಕುಗಳನ್ನು ಉದ್ಯೋಗಿಗಳಿಗೆ ನೀಡುವುದರ ಜೊತೆಗೆ ರಾಷ್ಟ್ರೀಯ ಆರ್ಥಿಕ ಅಭಿವೃದ್ದಿಯ ಭಾಗವಾಗಿ ಅನಿರ್ಬಂಧಿತ ಉತ್ಪಾದನೆ ಮತ್ತು ಗರಿಷ್ಠ ಉತ್ಪಾದಕತೆಯ ಮೂಲಕ ಹೂಡಿದ ಬಂಡವಾಳಕ್ಕೆ ಪ್ರತಿಫಲ ನೀಡಬೇಕು ಮತ್ತು ಹಾಗಾಗಬೇಕಾದರೆ ಕೈಗಾರಿಕೆಗಳಲ್ಲಿ ಮುಷ್ಕರ, ಬೀಗಮುದ್ರೆ ಅಥವಾ ಉತ್ಪಾದನೆ ಮತ್ತು ಉತ್ಪಾದನೆಗೆ ಭಂಗ ತರುವ ಅಂಶಗಳನ್ನು ತಡೆಗಟ್ಟಬೇಕಾದ ಅವಶ್ಯಕತೆಯನ್ನು ಮನಗಂಡು ಆಗ ಜಾರಿಯಲ್ಲಿದ್ದ 1929 ರ ವೃತ್ತಿ ವಿವಾದಗಳ ಕಾಯಿದೆಯನ್ನು (ಟ್ರೇಡ್ ಡಿಸ್ಪ್ಯೂಟ್ ಆಕ್ಟ್) ಹಿಂಪಡೆದುಕೊಂಡು 1947 ರ ಕೈಗಾರಿಕಾ ವಿವಾದಗಳ ಕಾಯಿದೆಯನ್ನು ಜಾರಿಗೆ ತರಲಾಯಿತು.
 
ನಮ್ಮ ದೇಶದಲ್ಲಿ ಕೈಗಾರಿಕಾ ಕಾಯಿದೆಗಳ ಪ್ರಸ್ಥಾಪ ಬಹಳ ಹಿಂದೆಯೇ ಆಗಿದೆ. ಯಾಜ್ನಾವಲ್ಕ್ಯ, ಕೌಟಿಲ್ಯ, ಮನು ಮುಂತಾದ ನ್ಯಾಯಶಾಸ್ತ್ರ ವಿದ್ವಾಂಸರು ಪ್ರಾಚೀನ ಕಾಲದಲ್ಲಿಯೇ ಇದ್ದರು. ಮಾಲೀಕ ಮತ್ತು ಆತನ ಅಧೀನದಲ್ಲಿದ್ದ ವ್ಯಕ್ತಿಗಳ ನಡುವಣ ಸಂಬಂಧದ ಬಗ್ಗೆ ಮತ್ತು ಅವರುಗಳ ಸಂಬಂಧವನ್ನು ನಿರ್ಣಯಿಸುವ ರೀತಿ ನೀತಿಗಳ ಬಗ್ಗೆ ಬಹಳ ಹಿಂದೆಯೇ ತಿಳಿಸಲಾಗಿತ್ತು. ಈಗಿನ ದಿನಗಳಲ್ಲಿ ನಾವು ಉದ್ಯೋಗಿಗಳು ಎಂದು ಯಾರನ್ನು ಕರೆಯುತ್ತೇವೆಯೋ ಆ ವರ್ಗದ ಜನರ ವೇತನ, ಒಪ್ಪಂದಗಳು ಮತ್ತು ಒಪ್ಪಂದಗಳ ಉಲ್ಲಂಘನೆ, ರಜಾ ದಿನಗಳು, ಕೆಲಸದಲ್ಲಿ ತೋರುವ ದಕ್ಷತೆಗೆ ನೀಡುವ ಪ್ರೋತ್ಸಾಹ ಧನ ಮತ್ತು ಉದ್ಯೋಗಿಗಳಿಗೆ ವಿಧಿಸಲಾಗುವ ಶಿಕ್ಷೆಯ ಬಗ್ಗೆ ಕೂಡಾ ಈ ಹಿಂದೆಯೇ ತಿಳಿಸಲಾಗಿತ್ತು.[1]
 
ಉದ್ಯೋಗದಾತರು ಮತ್ತು ಉದ್ಯೋಗದಾತರು, ಕಾರ್ಮಿಕರು ಮತ್ತು ಕಾರ್ಮಿಕರು ಮತ್ತು ಕಾರ್ಮಿಕರು ಮತ್ತು ಉದ್ಯೋಗದಾತರ ಸಂಬಂಧಗಳಲ್ಲಿ ನ್ಯಾಯೋಚಿತವಾದ ಕರಾರುಗಳು, ಒಪ್ಪಂದಗಳು ಅಥವಾ ನಿಬಂಧನೆಗಳು ಇರಬೇಕೆನ್ನುವುದೇ 1947ರ ಕೈಗಾರಿಕಾ ಕಾಯಿದೆಗಳ ಮುಖ್ಯ ಉದ್ದೇಶ. ಈ ಉದ್ದೇಶ ಈಡೇರಿದಾಗ ಕಾರ್ಮಿಕರು ಮತ್ತು ಉದ್ಯೋಗದಾತರ ನಡುವಣ ಉದ್ಭವಿಸಬಹುದಾದ ವಿವಾದಗಳನ್ನು ತಡೆಗಟ್ಟಬಹುದಲ್ಲದೇ ಉದ್ಯೋಗದಾತನ ಸಂಸ್ಥೆಯ ಉತ್ಪಾದನೆ, ಉತ್ಪಾದಕತೆ, ಕೆಲಸದ ಗುಣಮಟ್ಟಗಳಲ್ಲಿ ಯಾವುದೇರೀತಿಯ ನಕಾರಾತ್ಮಕ ಹೊಂದಾಣಿಕೆ ಮಾಡಿಕೊಳ್ಳದೇ ಈಗಾಗಲೇ ಉದ್ಭವಿಸಿರಬಹುದಾದಂತಹ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬಹುದು.
 
ಕೈಗಾರಿಕಾ ವಿವಾದಗಳ ಕಾಯಿದೆಯು ಕೈಗಾರಿಕಾ ವಿವಾದಗಳ ಬಗ್ಗೆ ವ್ಯವಹರಿಸುತ್ತದೆ, ಸಂಧಾನ ಪ್ರಕ್ರಿಯೆ, ನ್ಯಾಯ ನಿರ್ಣಯ, ಒಪ್ಪಂದಗಳಿಗೆ ಅವಕಾಶ ಮಾಡಿಕೊಡುತ್ತದೆ ಮತ್ತು ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಕಕ್ಷಿದಾರರ ಹಕ್ಕುಗಳನ್ನು ಸಂರಕ್ಷಿಸುತ್ತದೆ, ನಿಯಂತ್ರಿಸುತ್ತದೆ ಮತ್ತು ನ್ಯಾಯ ನಿರ್ಣಯದ ತೀರ್ಪು/ ಐತೀರ್ಪು  ಹಾಗೂ ಒಪ್ಪಂದಗಳನ್ನು ಜಾರಿಗೊಳಿಸಲು ಅಧಿಕಾರವನ್ನೂ ನೀಡುತ್ತದೆ. ನ್ಯಾಯ ನಿರ್ಣಯಿಸುವ ಅಧಿಕಾರಿಗೆ ಈ ಕಾಯಿದೆಯ ಅಡಿಯಲ್ಲಿ ದೊರಕುವ ಅಧಿಕಾರದಿಂದಾಗಿ ಕಾನೂನುಬಾಹಿರವಾಗಿ ಉದ್ಯೋಗದಿಂದ ವಜಾ ಆಗಿರುವ ಅಥವಾ ಕೆಲಸದಿಂದ ಬಿಡುಗಡೆಯಾಗಿರುವ ಉದ್ಯೋಗಿಗೆ ಕೆಲಸ/ ಉದ್ಯೋಗದಲ್ಲಿ ಮರು ನೇಮಕಾತಿಯಂತಹ ಪರಿಹಾರಗಳನ್ನು ಕೂಡಾ ನೀಡುತ್ತದೆ. ಈ ರೀತಿಯ ಪರಿಹಾರ ನೀಡುವ ಅಧಿಕಾರ ಇನ್ನಿತರ ನ್ಯಾಯಾಲಯಗಳಲ್ಲಿ ಸಾಧ್ಯವಾಗುವುದಿಲ್ಲ ಅಥವಾ ಮರು ನೇಮಕಾತಿಯಂತ ಪರಿಹಾರಗಳು ಉದ್ಯೋಗಿ ಮತ್ತು ಉದ್ಯೋಗದಾತರ ನಡುವಣ ಔದ್ಯೋಗಿಕ ಕರಾರುಗಳನ್ವಯ ಮಾತ್ರವೇ ನ್ಯಾಯ ನಿರ್ಣಯಿಸುವ ನ್ಯಾಯಾಲಯಗಳಲ್ಲಿ  ಸಮರ್ಥನೀಯವಾಗುವುದಿಲ್ಲ.
 
ಆದರೆ ಕೈಗಾರಿಕಾ ವಿವಾದಗಳ ನ್ಯಾಯ ನಿರ್ಣಯ ಮಾಡುವ ಕೈಗಾರಿಕಾ ನ್ಯಾಯಾಧಿಕರಣಗಳು ಸಿವಿಲ್ ನ್ಯಾಯಾಲಯಗಳಿಗಿಂತಾ ಹೆಚ್ಚಿನ ಅಧಿಕಾರ ಹೊಂದಿರುತ್ತವೆ. ನ್ಯಾಯೋಚಿತವೆನಿಸಿದ ಸಂದರ್ಭಗಳಲ್ಲಿ ಕೈಗಾರಿಕಾ ನ್ಯಾಯಾಧಿಕರಣಗಳು ಕಕ್ಷಿದಾರರ ಮೇಲೆ ಹೊಸ ಬಾಧ್ಯತೆಗಳನ್ನು ಹೊರಿಸಬಹುದು ಅಥವಾ/ ಮತ್ತು ಹೊಸ ಸೌಲಭ್ಯಗಳನ್ನು ನೀಡಲೂಬಹುದು. ಸಾಮಾಜಿಕ ನ್ಯಾಯ, ಉದ್ಯೋಗದಾತರು ಮತ್ತು ಉದ್ಯೋಗಿಗಳ ನಡುವಣ ಸೌಹಾರ್ದಯುತ ಸಂಬಂಧ, ಆರ್ಥಿಕ ಪ್ರಗತಿ ಮತ್ತು ಸುಸ್ಥಿರತೆಯನ್ನು ಕಾಪಾಡಲು ನ್ಯಾಯಾಧಿಕರಣಗಳು ನ್ಯಾಯ ನಿರ್ಣಯಗಳನ್ನು ನೀಡುತ್ತವೆ. ಕೈಗಾರಿಕಾ ವಿವಾದಗಳ ಕಾಯಿದೆಗೆ ಅನುಸಾರವಾದ ಶಾಸನಬದ್ದ ನಿಯಮಗಳು ಕೈಗಾರಿಕಾ ವಿವಾದಗಳನ್ನು ಪರಿಹರಿಸಲು ನ್ಯಾಯಾಧಿಕರಣಗಳಿಗೆ ಅಪಾರ ಅಧಿಕಾರ ನೀಡಿವೆ. ಕೈಗಾರಿಕಾ ನ್ಯಾಯಾಧಿಕರಣಗಳ ನ್ಯಾಯ ನಿರ್ಣಯದ ಪ್ರಕ್ರಿಯೆ ಕೇವಲ ಕಾಯಿದೆಗಳು, ಶಾಸನಗಳು ಅಥವಾ ನಿಯಮಾವಳಿಗಳಲ್ಲಿ ಏನನ್ನು ಹೇಳಲಾಗಿದೆಯೋ ಅದಷ್ಟಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ನ್ಯಾಯಾಧಿಕರಣ  ನೀಡುವ ತೀರ್ಪು ಇತರೇ ಹಲವಾರು ನ್ಯಾಯಾಲಯಗಳು ಚಿಂತಿಸಲಾರದ ಹಲವಾರು ಆಯಾಮಗಳಿಂದ ಕೂಡಿರಬಹುದು. ನ್ಯಾಯೋಚಿತವಾದ ಸಂದರ್ಭಗಳಲ್ಲಿ ಕಾಯಿದೆ ಅಥವಾ ನಿಯಮಗಳಲ್ಲಿ ಇಲ್ಲದೇ ಇರುವ ಹೊಸ ಕಟ್ಟುಪಾಡುಗಳನ್ನು ಕೂಡಾ ಅನುಸರಿಸುವಂತೆ ನ್ಯಾಯಾಧಿಕರಣವು ಕಕ್ಷಿದಾರರಿಗೆ ನಿರ್ದೇಶನ ನೀಡಬಹುದು ಎಂದು ಬಾಂಬೆ ಉಚ್ಚ ನ್ಯಾಯಾಲಯವು ಇತ್ತೀಚಿನ ತೀರ್ಪಿನಲ್ಲಿ ತಿಳಿಸಿದೆ.[2]
 
ಕೈಗಾರಿಕಾ ನ್ಯಾಯಾಧಿಕರಣಗಳಿಗೆ ಈ ರೀತಿಯ ಅಧಿಕಾರ ನೀಡುವುದರ ಮೂಲಕ ಅನ್ಯಾಯಯುತ ಕಾರ್ಮಿಕ ನಡವಳಿಕೆಗಳನ್ನು ತಡೆಗಟ್ಟಿ, ಸಾಮೂಹಿಕ ವ್ಯವಹರಿಸುವಿಕೆಗೆ ಅನುಕೂಲಕರ ವಾತಾವರಣ ಕಲ್ಪಿಸಿ ಕೈಗಾರಿಕಾ ಶಾಂತಿಯನ್ನು ಕಾಪಾಡಿಕೊಳ್ಳಲು ಕೈಗಾರಿಕಾ ವಿವಾದಗಳ ಕಾಯಿದೆಯು ಅವಕಾಶ ಮಾಡಿಕೊಡುತ್ತದೆ.[3]
 
ಕೈಗಾರಿಕಾ ವಿವಾದಗಳ ಕಾಯಿದೆಯು ಕಾರುಣ್ಯ ಪೂರ್ಣತೆಯನ್ನು ಹೊಂದಿರುವ ಒಂದು ಕ್ರಮ/ ವ್ಯವಸ್ಥೆ.  ಕೈಗಾರಿಕಾ ಒತ್ತಡಗಳನ್ನು ನಿವಾರಿಸಲು ಕೈಗಾರಿಕಾ ವಿವಾದಗಳನ್ನು ಬಗೆಹರಿಸಲು ಬೇಕಾದ ವ್ಯವಸ್ಥೆಯನ್ನು ಸ್ಥಾಪಿಸಿ, ಅದಕ್ಕೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಿ ಉತ್ಪಾದನೆಗೆ ಸಂಬಂಧಿಸಿದ ಭಾಗಸ್ಥರು ಉತ್ಪಾದನೆಗೆ ಪ್ರತಿಕೂಲಕರವಾದ ಅನಗತ್ಯ ಸಮರದಲ್ಲಿ ಶ್ರಮ ವ್ಯರ್ಥ ಮಾಡುವುದಕ್ಕೆ ಬದಲಾಗಿ ಕೈಗಾರಿಕಾ ನ್ಯಾಯದಾನದ  ಮೂಲಕ  ಸದ್ಭಾವನೆಯನ್ನು ಉಂಟುಮಾಡಲು ಮಾಡಲಾದ ಕಾಯಿದೆಯೇ ಕೈಗಾರಿಕಾ ವಿವಾದಗಳ ಕಾಯಿದೆ.[4]
 
ಇಂದಿನ ಕೈಗಾರಿಕಾ ನ್ಯಾಯಶಾಸ್ತ್ರದಲ್ಲಿ ಸಾಮಾಜಿಕ ನ್ಯಾಯವೆಂಬುದು ಅವಿಭಾಜ್ಯ ಅಂಗವಾಗಿದೆ. ಅದರ ವಿಸ್ತಾರ ಅಗಾಧ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಮೂಲತತ್ವಗಳ ಆಧಾರದ ಮೇಲೆ ಸ್ಥಾಪಿತವಾಗಿರುವ ಈ ಕೈಗಾರಿಕಾ ನ್ಯಾಯಶಾಸ್ತ್ರದ ಮೂಲ ಉದ್ದೇಶ ಸಾಮಾಜಿಕ ಮತ್ತು ಆರ್ಥಿಕ ಅಸಮತೋಲನ ಮತ್ತು ಅಸಮಾನತೆಗಳನ್ನು ತೊಡೆದುಹಾಕುವುದು.  ಈ ಸಿದ್ದಾಂತಗಳನ್ನು ಕೈಗಾರಿಕೆಗೆ ಸಂಬಂಧಪಟ್ಟ ವಿಷಯಗಳಿಗೆ ಅಳವಡಿಸಿಕೊಳ್ಳುವಾಗ ನಮ್ಮ ಪರಿಮಿತಿಯ ಗೆರೆ ಎಲ್ಲಿರಬೇಕು ಎಂಬುದೇ ಮುಖ್ಯ ಪ್ರಶ್ನೆ. ಕೈಗಾರಿಕಾ ನ್ಯಾಯ ನಿರ್ಣಯವೆಂಬುದು ಬರೀ ಕಾನೂನಿನ ಪ್ರಕಾರ ನಿರ್ಧರಿಸಬೇಕಾದ ವಿಷಯವಲ್ಲ. ಇದು ಅದಕ್ಕೂ ಮೀರಿದ್ದು. ಔದ್ಯೋಗಿಕ ಕಾಯಿದೆ ಮತ್ತು ಕರಾರುಗಳಲ್ಲಿ ಲಭ್ಯವಿಲ್ಲದಿದ್ದರೂ ನ್ಯಾಯೋಚಿತವೆನಿಸುವ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಒದಗಿಸುವುದೇ ಕೈಗಾರಿಕಾ ನ್ಯಾಯಶಾಸ್ತ್ರ.[5]
 
ಈ ಸಂದರ್ಭದಲ್ಲಿ  ಕಾರ್ಮಿಕ ಸಂಘಗಳು ಮತ್ತು ಉದ್ಯೋಗದಾತರು ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರವೇನೆಂದರೆ ಕಾಯಿದೆಗಳು ಮತ್ತು ಕಾನೂನುಗಳು ಅವರಿಷ್ಟದ ಪ್ರಕಾರ ಇರುವಂತಹದಲ್ಲ. ಪರಸ್ಪರ ಹೊಂದಾಣಿಕೆಯನ್ನು ಏರ್ಪಡಿಸಲು ಮತ್ತು ತಾವಿರುವ ಕ್ಷೇತ್ರಗಳಲ್ಲಿ ಸದಾ ಬದಲಾಗುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸಮನ್ವತೆಯನ್ನು ಕಾಪಾಡಿಕೊಳ್ಳಲು ತಮ್ಮ ಧೋರಣೆಗಳಲ್ಲಿ ಬದಲಾವಣೆಯನ್ನು ಕಂಡುಕೊಳ್ಳುವುದು ಕಾಯಿದೆ ಅಥವಾ ಸಾಂಘಿಕ ಬದಲಾವಣೆಗಿಂತಾ ಮುಖ್ಯವಾಗುತ್ತದೆ.  ಕೈಗಾರಿಕಾ ಸಂಬಂಧಗಳಲ್ಲಿ ಪ್ರೌಢತೆ ಮತ್ತು ಕಾನೂನಿನ ಸೂಕ್ಷ್ಮಗಳು ಒಳಗೊಳಗೇ ಬೆಸೆದುಕೊಂಡಿರುತ್ತವೆ. ಕೈಗಾರಿಕಾ ಬಾಂಧವ್ಯ ಸುಮಧುರವಾಗಿದ್ದರೆ ಈ ಕಾಯಿದೆ, ಕಾನೂನು ಮತ್ತು ಶಾಸನಗಳ ಪ್ರಾಧಾನ್ಯತೆ ಕನಿಷ್ಟ ಮಟ್ಟದ್ದಾಗಿರುತ್ತದೆ. ಕಾರ್ಮಿಕರು ಮತ್ತು ಉದ್ಯೋಗದಾತರು ಹೊಂದಿರುವ ಹಕ್ಕುಗಳು ಮತ್ತು ಬಾಧ್ಯತೆಗಳು ಪರಸ್ಪರ ಪೂರಕವಾಗಿರುವಂತಹುದು. ಒಬ್ಬರ ಪರವಾಗಿ ಬರೀ ಹಕ್ಕುಗಳಿವೆ ಮತ್ತು ಇನ್ನೊಬ್ಬರಿಗೆ ಬರೀ ಬಾಧ್ಯತೆಗಳಿವೆ ಎಂದುಕೊಂಡರೆ ಏನೂ ಸಾಧಿಸಲಾಗುವುದಿಲ್ಲ. ಹಾಗಾಗಿ ಉಭಯ ಪಕ್ಷಗಳು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಳ್ಳತಕ್ಕದ್ದು ಮತ್ತು ಕೈಗಾರಿಕಾ ಅಭ್ಯುದಯವೆಂಬ ಏಕೋದ್ದೇಶವನ್ನು ಸಾಧಿಸಲು ಆಂತರಿಕ ಮತ್ತು ಬಾಹ್ಯ ಬದಲಾವಣೆಗಳು ಅವಶ್ಯಕ ಎಂದು ಅರ್ಥ ಮಾಡಿಕೊಳ್ಳತಕ್ಕದ್ದು.[6]
 
1947 ರ ಕೈಗಾರಿಕಾ ವಿವಾದಗಳ ಕಾಯಿದೆ ಜಾರಿಗೆ ಬಂದು ಸುಮಾರು ಎಪ್ಪತ್ತು ವರ್ಷಗಳಾದವು. ಕಾಲದಿಂದ ಕಾಲಕ್ಕೆ ಈ ಕಾಯಿದೆಗೆ ತಿದ್ದುಪಡಿಗಳನ್ನು ಮಾಡಲಾಗಿದೆಯಾದರೂ ಕಳೆದ ಈ ಎಪ್ಪತ್ತು ವರ್ಷಗಳಲ್ಲಿ ಎಷ್ಟೋ ರೀತಿಯ ವೃತ್ತಿ, ಉದ್ಯೋಗ, ಉತ್ಪನ್ನಗಳು, ಕೈಗಾರಿಕೆಗಳು ಸತ್ತು ಹೋಗಿವೆ ಮತ್ತು ಅದೇ ರೀತಿಯಲ್ಲಿ ಎಷ್ಟೋ ರೀತಿಯ ಹೊಸ ವೃತ್ತಿ, ಉದ್ಯೋಗ, ಉತ್ಪನ್ನಗಳು, ಕೈಗಾರಿಕೆಗಳು ಜನ್ಮ ತಾಳಿವೆ.
 
ಈ ಕಾಯಿದೆ ಜಾರಿಗೆ ಬಂದ ಹೊಸದರಲ್ಲಿದ್ದ ರಕ್ಷಣಾತ್ಮಕ ಯುಗ ಮುಗಿದು ಉದಾರಿಕರಣದ ಯುಗ ಜಾರಿಗೆ ಬಂದಾಗಿದೆ. ಅದೇ ರೀತಿಯಲ್ಲಿ ಆಂತರಿಕ ಪೈಪೋಟಿಯಿಂದ ಅಂತರ್-ರಾಷ್ಟ್ರೀಯ ಪೈಪೋಟಿಗೆ ಭಾರತೀಯ ಕೈಗಾರಿಕೆಗಳು ಸಜ್ಜಾಗಬೇಕಾಗಿದೆ. ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತರಿಗೆ ಅತ್ಯುತ್ತಮ ಪ್ರತಿಫಲ ನೀಡುವ ವಾತಾವರಣದ ನಿರ್ಮಾಣ ಆಗಲೇ ಬೇಕಾಗಿದೆ.
 
ಡಾ. ರವೀಂದ್ರ ವರ್ಮಾ ನೇತೃತ್ವದ ಎರಡನೇ ಕಾರ್ಮಿಕ ಆಯೋಗ 2002 ರಲ್ಲಿ ತನ್ನ ವರದಿಯನ್ನು ಸಲ್ಲಿಸಿ ಕೆಲಸದ ಅವಧಿ, ಸೇವಾ ಸ್ಥಿತಿ-ಗತಿಗಳು, ಕೆಲಸ ವಿಧಾನ, ವೃತ್ತಿ, ಸೇವೆಗಳು ಇತ್ಯಾದಿಗಳ ಬಗ್ಗೆ ದೀರ್ಘ ಚರ್ಚೆ ನಡೆಸಿ ಭವಿಷ್ಯತ್ತಿನ ಅವಶ್ಯಕತೆಗಳನ್ನು ಗಮನದಲ್ಲಿರಿಸಿಕೊಂಡು ಹಲವಾರು ಬದಲಾವಣೆಗಳನ್ನು ಸೂಚಿಸಿದೆ.
 
ಇವೆಲ್ಲವನ್ನು ಗಮನದಲ್ಲಿರಿಸಿಕೊಂಡು ತ್ರೈಪಕ್ಷೀಯ ಅಂಗಗಳಾದ ಸರಕಾರ, ಉದ್ಯೋಗಿ ಮತ್ತು ಉದ್ಯೋಗದಾತರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಕಾಪಾಡುವುದರ ಜೊತೆಗೆ  ಸೂಕ್ತವೆನಿಸುವ ಬದಲಾವಣೆಗಳನ್ನು ತರುವ ಅವಶ್ಯಕತೆ ಇದೆ ಎಂಬುದು ನಮ್ಮ ಅನಿಸಿಕೆ.
 
ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯ ಮತ್ತು ಆಯಾ ರಾಜ್ಯಗಳ ಉಚ್ಚ ನ್ಯಾಯಾಲಯಗಳನ್ನು ಹೊರತುಪಡಿಸಿದಂತೆ ಇನ್ನಿತರ ನ್ಯಾಯಾಲಯಗಳಲ್ಲಿ ಆಯಾ ರಾಜ್ಯದ ಅಧಿಕೃತ ಭಾಷೆಗಳಲ್ಲಿಯೇ ನ್ಯಾಯಾಲಯದ ಕಲಾಪಗಳನ್ನು ನಡೆಸಬೇಕೆಂದು ನಿರ್ಣಯಿಸಿ ಬಹಳಷ್ಟು ವರ್ಷಗಳಾಗಿವೆ. ಅಂತೆಯೇ ಕರ್ನಾಟಕ ರಾಜ್ಯದಲ್ಲಿಯೂ ಕೂಡಾ ನ್ಯಾಯಾಲಯದ ಕಲಾಪಗಳನ್ನು ಕನ್ನಡ ಭಾಷೆಯಲ್ಲಿಯೇ ನಡೆಸಬೇಕೆಂಬ ನಿರ್ಣಯವಿದೆ. ಈಗಾಗಲೇ ಕೆಳಹಂತದ ನ್ಯಾಯಾಲಯಗಳಲ್ಲಿ ನ್ಯಾಯಾಲಯದ ನಡಾವಳಿಗಳು ಮತ್ತು ತೀರ್ಪುಗಳನ್ನು ಕನ್ನಡದಲ್ಲಿಯೇ ನಡೆಸುವ ಮತ್ತು ನೀಡುವ ಪ್ರಕ್ರಿಯೆ ನಿಧಾನವಾಗಿ ಜಾರಿಗೆ ಬರುತ್ತಿದೆ. ಕನ್ನಡದಲ್ಲಿ ಕರ್ನಾಟಕದ ಉಚ್ಚ ನ್ಯಾಯಾಲಯದ ಕಲಾಪಗಳು ಕೂಡಾ  ಕನ್ನಡದಲ್ಲಿ ನಡೆಯಬೇಕು ಮತ್ತು ತೀರ್ಪುಗಳನ್ನು ಕೂಡಾ ಕನ್ನಡದಲ್ಲಿಯೇ ನೀಡಬೇಕು ಎಂದು ವರ್ಷ 2014 ರಲ್ಲಿ ಕರ್ನಾಟಕ ರಾಜ್ಯದ ಸಚಿವ ಸಂಪುಟ ನಿರ್ಧಾರ ಕೈಗೊಂಡಾಗ ಕರ್ನಾಟಕ ಉಚ್ಚ ನ್ಯಾಯಾಲಯದ ಆಗಿನ ಗೌರವಾನ್ವಿತ ನ್ಯಾಯಮೂರ್ತಿಗಳು ಮತ್ತು ಕರ್ನಾಟಕ ನ್ಯಾಯಾಂಗ ಅಕಾಡೆಮಿ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಎನ್. ಕುಮಾರ್ ರವರು ಪ್ರತಿಕ್ರಿಯಿಸುತ್ತಾ ನ್ಯಾಯಾಂಗದಲ್ಲಿ ಕನ್ನಡ ಬಳಕೆಪರಿಣಾಮಕಾರಿಯಾಗಿ ಜಾರಿಗೆ ಬರಲು ಬರಹಗಾರರು ಕಾನೂನು ಪುಸ್ತಕಗಳನ್ನು  ಹೆಚ್ಚಿನ ಸಂಖ್ಯೆಯಲ್ಲಿ ಬರೆದು ಪ್ರಕಟಿಸುವುದು ಅತ್ಯಂತ ಅವಶ್ಯಕ ಎಂದು ಹೇಳಿದ್ದಾರೆ. ಜೊತೆಗೆ ಅತ್ಯಂತ ಶ್ರೇಷ್ಠ ಮಟ್ಟದ ಇಂಗ್ಲೀಷ್ ಭಾಷೆಯಲ್ಲಿರುವ ಕಾಯಿದೆಗಳು, ಶಾಸನಗಳು, ನಿಯಮಗಳು ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಓದಿ ಆಯಾ ಕಾಯಿದೆಗಳು, ಶಾಸನಗಳು, ನಿಯಮಗಳು ಹಾಗೂ ನ್ಯಾಯಾಲಯಗಳ ತೀರ್ಪುಗಳ ಮೂಲ ಉದ್ದೇಶಗಳನ್ನು ಯಥಾವತ್ತಾಗಿ ಅರ್ಥ ವ್ಯಾಖ್ಯಾನ ಮಾಡುವುದು ಬಹಳ ಕಷ್ಟಕರವಾದ ವಿಚಾರ. ಎಷ್ಟೋ ಸಂದರ್ಭಗಳಲ್ಲಿ ಕಾಯಿದೆಗಳಲ್ಲಿನ ಕೆಲವು ಅಂಶಗಳ ಬಗ್ಗೆ ಸೂಕ್ತ ಅರ್ಥ ವ್ಯಾಖ್ಯಾನ ನೀಡಲು ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠವೇ ತೀರ್ಮಾನ ಕೈಗೊಳ್ಳಬೇಕಾದ ಸಂದರ್ಭಗಳೂ ಬಂದಿವೆ. ಈ ಎಲ್ಲಾ ಪ್ರಮುಖ ಅಂಶಗಳನ್ನು ಹಾಗೂ ನ್ಯಾಯಾಲಯಗಳು, ವಕೀಲರುಗಳು, ಸರಕಾರಿ ಅಧಿಕಾರಿಗಳು, ಶಿಕ್ಷಣ ತಜ್ನರು, ವಿದ್ಯಾರ್ಥಿಗಳು, ಕಕ್ಷಿದಾರರು ಮತ್ತು ಸಂಬಂಧಪಟ್ಟ ಇತರ ಎಲ್ಲಾ ಭಾಗೀದಾರರ ಅವಶ್ಯಕತೆಗಳನ್ನು ಗಮನದಲ್ಲಿರಿಸಿಕೊಂಡು ಮಹತ್ತರವಾದ ಈ“ಕೈಗಾರಿಕಾ ವಿವಾದಗಳ ಕಾಯಿದೆ” ಯನ್ನು ಸವಿಸ್ತಾರವಾಗಿ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ರಚಿಸುವ ಪ್ರಯತ್ನವನ್ನು ಮಾಡಲಾಗಿದೆ.
 
ಇದರ ಜೊತೆಗೆ ಈಗ ತಮ್ಮ ಮುಂದಿರುವ “ಕೈಗಾರಿಕಾ ವಿವಾದಗಳ ಕಾಯಿದೆ” ಯ ಪುಸ್ತಕದ ಉಪಯುಕ್ತತೆಯನ್ನು ಹೆಚ್ಚಿಸಲು ಭಾರತದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯ ಮತ್ತು ರಾಜ್ಯಗಳ ಗೌರವಾನ್ವಿತ ಉಚ್ಚ ನ್ಯಾಯಾಲಯಗಳು 2016 ರ ಡಿಸೆಂಬರ್ ತಿಂಗಳವರೆಗೆ ನೀಡಿರುವ ತೀರ್ಪುಗಳ ಮುಖ್ಯಾಂಶಗಳನ್ನು ಒದಗಿಸಲಾಗಿದೆ.
 
ನ್ಯಾಯಾಲಯಗಳು, ವಕೀಲರುಗಳು, ಉದ್ಯೋಗದಾತರು, ಉದ್ಯೋಗಿಗಳು, ಶಿಕ್ಷಣ ತಜ್ನರು, ವಿದ್ಯಾರ್ಥಿಗಳು, ಸರಕಾರಿ ಅಧಿಕಾರಿಗಳು ಮತ್ತು ಎಲ್ಲಾ ಆಡಳಿತವರ್ಗದ ಅಧಿಕಾರಿಗಳಿಗೆ ಈ ಪುಸ್ತಕ ಅನುಕೂಲಕರವಾಗುತ್ತದೆ ಎಂದು ನಂಬಿರುತ್ತೇವೆ.
 
ಈ ಹಿಂದೆ ನಾವು ಬರೆದು ಪ್ರಕಟಿಸಿದ “ ಕಾರ್ಮಿಕ ಕಾನೂನು ಮತ್ತು ಮಾದರಿ ಪತ್ರಗಳು”, “ಕೈಗಾರಿಕಾ ಕಾಯಿದೆಗಳು”, “ಕಾರ್ಮಿಕ ಸಂಘಗಳ ಕಾಯಿದೆ ಮತ್ತು ನಿಯಮಗಳು”, “ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸುರಕ್ಷತೆ ಕಾಯಿದೆ ಮತ್ತು ನಿಯಮಗಳು”, “HR Reports”, ಮತ್ತು “ಸ್ಥಾಯೀ ಆದೇಶಗಳ ಕಾಯಿದೆ ಮತ್ತು ನಿಯಮಗಳು” ಪುಸ್ತಕಗಳಿಗೆ ಓದುಗರು ಅಪಾರ ಪ್ರೋತ್ಸಾಹ ನೀಡಿದ್ದಾರೆ. ಅಂತಹುದೇ ರೀತಿಯ ಪ್ರೋತ್ಸಾಹ ಈ ಪುಸ್ತಕಕ್ಕೂ ದೊರಕುವುದೆಂಬ ಆಶಯ ನಮ್ಮದು
 
ಎಂ ಆರ್ ನಟರಾಜ್

ಅಡಿಟಿಪ್ಪಣಿಗಳು
[1] ನ್ಯಾಯಮೂರ್ತಿಡಿ.ಡಿ ಸೇಥ್ ರವರು ಬರೆದಿರುವ , “Industrial Disputes Act, 1947”, 10 Revised edition, Allahabad, Law Publishing House, 2016 ಪುಸ್ತಕದ ಮುನ್ನುಡಿಯಿಂದ ಉಲ್ಲೇಖಿಸಲಾಗಿದೆ

[2] ಮುನಿಸಿಪಲ್ ಕಾರ್ಪೋರೇಷನ್ ಆಫ್ ಗ್ರೇಟರ್ ಮುಂಬೈ ವರ್ಸಸ್ ಕಾಚಾರ ವಾಹ್ತುಕ್ ಶ್ರಮಿಕ್ ಸಂಘ ಕೇಸಿನಲ್ಲಿ ದಿನಾಂಕ 22.12.2016 ರಂದು ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪು (https://indiankanoon.org/doc/ 158892017)
 
[3] ಹರಿ ನಂದನ್ ಪ್ರಸಾದ್ ಮತ್ತು ಇತರರು ವರ್ಸಸ್ ಮ್ಯಾನೇಜ್ಮೆಂಟ್ ಆಫ್ ಎಫ್.ಸಿ.ಐ ಮತ್ತು ಇತರರು ಕೇಸಿನಲ್ಲಿ ದಿನಾಂಕ 12..2.2014 ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು (2014) 7 SCC 190

[4] ಲೈಫ್ ಇನ್ಷೂರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ವರ್ಸಸ್ ಡಿ.ಜೆ.ಬಹಾದ್ದೂರ್ ಕೇಸಿನಲ್ಲಿ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ರವರು ವ್ಯಕ್ತಪಡಿಸಿರುವ ಅಭಿಪ್ರಾಯ 1980 Lab IC 1218, 1226(SC)
 
[5] ಪಿ.ಆರ್. ಬಾಗ್ರಿಯವರು ಬರೆದಿರುವ Quoted from the preface of the first edition of P R Bagri “ Law of Industrial Disputes”, 3 Edition, Kolkata, Kamal Law House, 2001ಪುಸ್ತಕದ ಮುನ್ನುಡಿಯಿಂದ ಉಲ್ಲೇಖಿಸಲಾಗಿದೆ
 
[6] ಜೆ.ಎಲ್ ಧರ್ ರವರು ಬರೆದಿರುವ “Practical guide to Industrial Employment”, 1st Edition, New Delhi, Taxmann Allied Services (P) Ltd, 1999, ಪುಸ್ತಕದ ಮುನ್ನುಡಿಯಿಂದ ಉಲ್ಲೇಖಿಸಲಾಗಿದೆ.
Picture
0 Comments



Leave a Reply.

    Categories

    All
    Books
    General
    HR Training
    Human Resource
    Labour Law
    ಕನ್ನಡ ಲೇಖನಗಳು

    M&HR Solutions Private Limited

    ​List Your Product on Our Website


    RSS Feed


    Human Resources And Labour Law Classes

Site

  • Home
  • About Us
  • HR Blog
  • HR Books
  • Services
  • HR Job Openings
  • ​​List Your Product on Our Website
Vertical Divider

Major Services

  • Prevention of Sexual Harassment (PoSH)
  • Domestic Enquiry
  • Translations & Typing
  • Contract Labour
  • Printing
  • Publications
  • Payroll
  • ​Registration Services

Our Other Websites

  • ​www.hrkancon.com  
  • www.niratanka.org  
  • www.socialworkfootprints.org
Vertical Divider

Training Programmes

  • Certificate Course on Prevention of Sexual Harassment (PoSH)
  • Disciplinary Proceedings & Domestic Enquiry
  • Plan Your Retirement
  • ​Microsoft Excel (Corporate) Training

Contact Us

  • 080-23213710
  • +91-8073067542
  • MAIL-hrniratanka@mhrspl.com

ONLINE STORE
List Your Products in our Website 
Receive email updates on the new books & offers for the subjects of interest to you.
M&HR Solutions Private Limited
Copyright :MHRSPL-2020, website designed and developed by :www.socialworkfootprints.org