ಸಂಪಾದಕರು : ಪ್ರೊ. ಎಚ್.ಎಂ. ಮರುಳಸಿದ್ಧಯ್ಯ ಪುಟ : 104 ಬಹಳ ವರ್ಷಗಳ ಹಿಂದೆ ಆಂಗ್ಲ ಭಾಷೆಯಲ್ಲಿದ್ದ ಸಮಾಜ ವಿಜ್ಞಾನ, ಸಮಾಜಕಾರ್ಯ ಸಾಹಿತ್ಯವನ್ನು ಓದುತ್ತಿದ್ದಾಗ ಕೆಲವು ಶಬ್ದಗಳ ಸರಿಯಾದ ಅರ್ಥ ಆಗಲಿಲ್ಲ. ಅಂಥ ಶಬ್ದಗಳನ್ನು ಪಟ್ಟಿ ಮಾಡುತ್ತಾ ಅವುಗಳಿಗೆ ಸೂಕ್ತವಾದ ಕನ್ನಡ ಶಬ್ದಗಳು ಯಾವುವು ಎಂಬುದನ್ನು ಆಂಗ್ಲ-ಕನ್ನಡ ನಿಘಂಟುಗಳಲ್ಲಿ ದೊರೆಯುವ ಸಮಾನ ಅರ್ಥಗಳ ಪಟ್ಟಿಯನ್ನು ಮಾಡತೊಡಗಿದೆ. ಈ ಕೆಲಸದ ಮೂಲಕ ನನ್ನ ತಿಳಿವಳಿಕೆಯನ್ನು ಹೆಚ್ಚು ಮಾಡಿಕೊಳ್ಳಬೇಕು ಎಂಬುದೇ ಆರಂಭದ ಉದ್ದೇಶವಾಗಿತ್ತು. ಆದರೆ, ಆ ಶಬ್ದಗಳು ಇತರರಿಗೂ, ಅದರಲ್ಲೂ ವಿದ್ಯಾರ್ಥಿಗಳಿಗೆ, ಹೆಚ್ಚಾಗಿ ಬೇಕಾಗುತ್ತವೆ ಎಂದು ಒಂದು ಕಿರು ಶಬ್ದಕೋಶವನ್ನು ಸಿದ್ಧ ಮಾಡತೊಡಗಿದೆ. ಈ ನನ್ನ ಕೆಲಸವನ್ನು ನನ್ನ ಸಹೋದ್ಯೋಗಿಗಳ ಮುಂದಿರಿಸಿ, ಅವರ ಸಹಕಾರವನ್ನೂ ಪಡೆದುಕೊಳ್ಳತೊಡಗಿದೆ. ಇಂಥ ಶಬ್ದಕೋಶವು ಸಮಾಜಕಾರ್ಯದ ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ, ಕಾರ್ಯಕರ್ತರಿಗೂ ತುಂಬಾ ಉಪಯುಕ್ತವಾಗುತ್ತದೆ ಎಂಬ ಅಭಿಪ್ರಾಯವು ಅವರದೂ ಆಗಿತ್ತು. ಅವರು ನನಗೆ ನೆರವಾಗಲು ಮುಂದಾದರು. ಹೀಗೆ ಈ ಪುಸ್ತಿಕೆಯು ಸಿದ್ಧವಾಯಿತು. ಇದು ಸಮಾಜಕಾರ್ಯದ ನಿಘಂಟು; ಕೇವಲ ಕೆಲವು ಶಬ್ದಾರ್ಥಗಳನ್ನು ನೀಡುತ್ತದೆಯಲ್ಲದೆ ಸಮಾಜಕಾರ್ಯದಲ್ಲಿ ಬಳಸುವ ಎಲ್ಲ ಪಾರಿಭಾಷಿಕ, ಮತ್ತಿತರ ಶಬ್ದಗಳನ್ನಾಗಲಿ ಅವುಗಳ ವ್ಯಾಖ್ಯಾನವನ್ನಾಗಲಿ ಒಳಗೊಂಡಿಲ್ಲ. ಅಂಥ ನಿಘಂಟೂ ಅತ್ಯಗತ್ಯ ಎಂಬುದು ನನ್ನ ಅಭಿಪ್ರಾಯವಾದರೂ ಅಂಥ ನಿಘಂಟನ್ನು ಸಿದ್ಧಪಡಿಸುವುದು ಸದ್ಯಕ್ಕೆ ಸಾಧ್ಯವಾಗುವುದಿಲ್ಲ ಎಂದುಕೊಂಡು ಕೆಲವು ಉಪಯುಕ್ತ ಶಬ್ದಗಳ ಕನ್ನಡ ಅರ್ಥವನ್ನು ಮಾತ್ರವೇ ಈ ಪುಸ್ತಿಕೆಯಲ್ಲಿ ನೀಡಲಾಗಿದೆ. ಪಾರಿಭಾಷಿಕ ಶಬ್ದಗಳಿಗೆ ವ್ಯಾಖ್ಯಾನವನ್ನು ಸಿದ್ಧಪಡಿಸುವ ಉದ್ದೇಶ ನನಗೂ, ನನ್ನ ಮಿತ್ರರಿಗೂ ಇದೆಯಾದುದರಿಂದ ಅಂಥ ನಿಘಂಟನ್ನು ಸಿದ್ಧಪಡಿಸಲು ಪ್ರಯತ್ನಿಸಲಾಗುವುದು.
ಎರಡನೆಯ ಭಾಗದಲ್ಲಿ ಸಮಾಜಕಾರ್ಯಕರ್ತರಿಗೆ ಅಗತ್ಯವಾದ ನಮ್ಮ ಸಂಸ್ಕೃತಿಯ ಕೆಲವು ಉಪಯುಕ್ತ ವಿಷಯಗಳನ್ನು ಸೇರಿಸಲಾಗಿದೆ. ಈ ಕಿರು ಪುಸ್ತಿಕೆಯು ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಉಪಯುಕ್ತವಾಗುತ್ತದೆ ಎಂಬ ಅಭಿಪ್ರಾಯದಿಂದ ಇದನ್ನು ಹೊರತರಲಾಗುತ್ತಿದೆ. ಇದು ಪರಿಪೂರ್ಣವಾದದ್ದಲ್ಲ ಎಂಬುದನ್ನು ನಾನು ಬಲ್ಲೆ. ಆದರೂ ಇದು ಕೆಲಮಟ್ಟಿಗಾದರೂ ಉಪಯುಕ್ತವಾಗುತ್ತದೆ ಎಂದು ಆಶಿಸುತ್ತೇನೆ. ಈ ಶಬ್ದಕೋಶದ ಸಿದ್ಧತೆಯಲ್ಲಿ ಅನೇಕರು ನನಗೆ ನೆರವಾಗಿದ್ದಾರೆ. ಅದರಲ್ಲಿಯೂ ಡಾ. ಸಿ.ಆರ್. ಗೋಪಾಲ್ ಅವರ ನೆರವು ವಿಶಿಷ್ಟವೂ, ವಿಶೇಷವೂ ಆಗಿದೆ. ಇವರೆಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಈ ಶಬ್ದಕೋಶವನ್ನು ನಿರುತ ಪಬ್ಲಿಕೇಷನ್ಸ್ ಅವರು ಪ್ರಕಟಿಸುವಲ್ಲಿ ನೆರವಾಗಿರುವುದನ್ನು ನಾನು ವಿಶೇಷವಾಗಿ ನೆನೆಯುತ್ತೇನೆ. ಈ ಪ್ರಕಟಣೆಯು ಸಮಾಜಕಾರ್ಯದಲ್ಲಿ ತೊಡಗಿರುವವರಿಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ. ಇದರಲ್ಲಿನ ಕೊರತೆಗಳನ್ನು ತೋರಿಸುವವರಿಗೆ ನಾನು ಕೃತಜ್ಞನಾಗಿರುತ್ತೇನೆ. ಆಗಸ್ಟ್, 2014 ಪ್ರೊ. ಎಚ್.ಎಂ. ಮರುಳಸಿದ್ಧಯ್ಯ (ನಿವೃತ್ತ ಪ್ರಾಧ್ಯಾಪಕರು, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ)
0 Comments
Leave a Reply. |
Archives
September 2020
Categories
All
|
Site |
Vertical Divider
|
Major ServicesOur Other Websites |
Vertical Divider
|
Training ProgrammesContact Us
|
Receive email updates on the new books & offers for the subjects of interest to you.
|
Copyright :MHRSPL-2020, website designed and developed by :www.socialworkfootprints.org