ಲೇಖಕರು : ಪ್ರೊ. ಎಚ್.ಎಂ. ಮರುಳಸಿದ್ಧಯ್ಯ ಪುಟ : 228 ಪರಿವಿಡಿ
ಅನುಬಂಧ - ಸಮಾಜಕಾರ್ಯದ ಕಣಸುಗಾರ ಲೇಖಕಿ-ಕು. ನಿವೇದಿತ ಬಿ.ಎಂ ಇತ್ತೀಚೆಗೆ ಅಂದರೆ 2013 ಫೆಬ್ರುವರಿ-ಮಾರ್ಚ್‍ನಲ್ಲಿ, ಅಪ್ಪಾಜಿಯವರು ಹಳೆಯ ನೆನಪುಗಳನ್ನು ಕೆದಕುತ್ತಿದ್ದರು. ಆಗ ನಮಗೆಲ್ಲ ಅನಿಸಿದ್ದು, ಇವುಗಳನ್ನೇ ಪುಸ್ತಕ ರೂಪದಲ್ಲಿ ಹಿಡಿದು ಅವುಗಳು ಹಾರದಂತೆ ನೋಡಿಕೊಳ್ಳಬಾರದೇಕೆ, ಎಂದು. ಅಸಂಖ್ಯ ಅಸಂಘಟಿತ ಅನುಭವಗಳಲ್ಲಿ ಮುಖ್ಯವಾದವುಗಳನ್ನು, ಅಂದರೆ, ಅವರ ಜೀವನದ ಮೈಲುಗಲ್ಲುಗಳಿಗೆ ಕಾರಣೀಭೂತರಾದವರ ಬಗ್ಗೆ ಬರೆಯುವುದು ಉಚಿತವೆನಿಸಿತು. ಆಗಲೇ ಅನೇಕರ ಬಗ್ಗೆ ಕೆಲವು ಸಂದರ್ಭಗಳಲ್ಲಿ ಬರೆದಿದ್ದರು, ಪ್ರಕಟಿಸಿದ್ದರು. ಚದುರಿದ್ದ ಇನ್ನು ಕೆಲವು ಹಳೆಯ, ಬಾಡದ ಹೂವುಗಳನ್ನು ಮತ್ತೆ ಒಂದೆಡೆ ಜೋಡಿಸಿ, ಮತ್ತು ಮಾಸಿದ್ದರೂ ಹಸಿರಾಗಿರುವ ವ್ಯಕ್ತಿಗಳ-ವ್ಯಕ್ತಿತ್ವಗಳನ್ನು ಮತ್ತೊಮ್ಮೆ ಚಿಗುರುವಂತೆ ಮಾಡಿ, ಅವುಗಳ ತೋರಣವನ್ನು ಕಟ್ಟಿದ್ದೇವೆ. ಅಪ್ಪಾಜಿಯವರು ಇವರನ್ನೆಲ್ಲಾ ಮತ್ತೆ ಸಂಜೆಗಣ್ಣಿನಲ್ಲಿ ನೋಡುತ್ತಾ ಇದ್ದರು, ಅವುಗಳು ನಮ್ಮ ಕೈಗಳ ಮೂಲಕ ಸೂಕ್ಷ್ಮರೂಪದಿಂದ ಸ್ಥೂಲ ರೂಪಕ್ಕೆ ಇಳಿದಿವೆ.
ಈ ಕೃತಿಯಲ್ಲಿ ಕಾಲೇಜಿನ ಸ್ನೇಹಿತ ರಾಮಚಂದ್ರನಿಂದ ಹಿಡಿದು `ಗೊತ್ತಿಗೆ ಹಚ್ಚಿದ ಗುರು ಗೋಯಲ್ ರವರೆಗೂ ಇರುವ ಚಿತ್ರಣಗಳನ್ನು ಕಾಣಬಹುದು. ಈ ಚಿತ್ರಣಗಳು ಅವರ ಜೀವನಾನುಭವದ ವೃಕ್ಷವಾಗಲು ಕಾರಣೀಭೂತವಾಗಿವೆ. ಇಲ್ಲಿ ಬರುವ ವ್ಯಕ್ತಿಗಳು ಬೇರೆ ಬೇರೆ ಗುಂಪುಗಳಿಗೆ, ಪ್ರದೇಶಗಳಿಗೆ ಸೇರಿದವರಾಗಿದ್ದಾರೆ, ಇಲ್ಲಿ ಪುರುಷರಿದ್ದಾರೆ, ಮಹಿಳೆಯರಿದ್ದಾರೆ, ಅಕ್ಷರಸ್ಥರಿದ್ದಾರೆ, ಅನಕ್ಷರಸ್ಥರಿದ್ದಾರೆ, ಅತ್ಯುನ್ನತ ಪದವಿಗಳನ್ನು ಪಡೆದವರಿದ್ದಾರೆ. ರಕ್ತ ಸಂಬಂಧಿಕರಿದ್ದಾರೆ, ರಕ್ತ ಸಂಬಂಧಿಕರಲ್ಲದಿದ್ದರೂ ಸಂಬಂಧಿಕರಿಗಿಂತ ಕಡಿಮೆಯೇನೂ ಅಲ್ಲದವರಿದ್ದಾರೆ. ಇವರೆಲ್ಲರೂ ಸೇರಿ, ನಮ್ಮ ತಂದೆಯವರ ಜೀವನಾನುಭವದ ವೃಕ್ಷದ ಬೇರುಗಳಾಗಿದ್ದಾರೆ-ಕಾಂಡಗಳಾಗಿದ್ದಾರೆ-ರೆಂಬೆ ಕೊಂಬೆಗಳಾಗಿ ಹರಡಿದ್ದಾರೆ. ಇವರಷ್ಟೇ ಅಲ್ಲ, ಇನ್ನೂ ಅನೇಕರು ಪ್ರಭಾವಗಳನ್ನು ಬೀರಿದ್ದಾರೆ ; ಇವರುಗಳಿಂದ ಒಳ್ಳೆಯದೂ ಆಗಿದೆ ಕೆಟ್ಟದ್ದೂ ಆಗಿದೆ. ಆ ಪ್ರಭಾವಗಳು ಕ್ಷಣಿಕವಾಗಿರಬಹುದು, ದೀರ್ಘವಾಗಿರಬಹುದು. ಆದರೆ ಎಲ್ಲವನ್ನೂ ದಾಖಲಿಸುವುದು ಕರಕಷ್ಟ. ಇವರೂ ಮರದ ಭಾಗದಲ್ಲಿ ಅಲ್ಲಲ್ಲಿ ನುಸುಳಿ ಕುಳಿತಿದ್ದಾರೆ. ಈ ಪುಸ್ತಕಗಳಲ್ಲಿ ಬರುವ ವ್ಯಕ್ತಿಗಳ ಇಡೀ ಜೀವನದ ವಿವರಗಳನ್ನೇನೂ ಇಲ್ಲಿ ಕೊಟ್ಟಿಲ್ಲ. ಆದರೆ ಅವರ ನೆಪದಲ್ಲಿ ತಂದೆಯವರು ತಮ್ಮ ಜೀವನದ ತುಣುಕುಗಳನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ, ಎಂದು ಅನಿಸುತ್ತದೆ. ಅವರೆಲ್ಲರೂ, ಇವರ ವ್ಯಕ್ತಿತ್ವದ ರೂಪಣಿಕೆಗೆ, ಜೀವನದ ನಿರ್ವಹಣೆಗೆ ನೇರವಾಗಿಯೋ ಪರೋಕ್ಷವಾಗಿಯೋ ನೆರವು ನೀಡಿದ್ದಾರೆ ಎಂಬುದನ್ನು ಕೃತಜ್ಞತಾಪೂರಕವಾಗಿ ನೆನೆದುಕೊಂಡಿರುವುದು ಕಾಣಿಸುತ್ತದೆ. ಈ ಪುಸ್ತಕ ನಿಮಗೆಲ್ಲ ಮೆಚ್ಚುಗೆ ಆಗಬಹುದೆಂದು ನಾವು ಭಾವಿಸಿದ್ದೇವೆ. ಜುಲೈ 2013 - ಕುಟುಂಬದ ಸದಸ್ಯರು
0 Comments
Leave a Reply. |
Archives
September 2020
Categories
All
|
Site |
Vertical Divider
|
Major ServicesOur Other Websites |
Vertical Divider
|
Training ProgrammesContact Us
|
Receive email updates on the new books & offers for the subjects of interest to you.
|
Copyright :MHRSPL-2020, website designed and developed by :www.socialworkfootprints.org